ಪುತ್ತೂರು: ಅಯ್ಯಪ್ಪನ ಭಕ್ತರಿಗೆ ಸ್ವಾಮಿಯ ಮಹಿಮೆಯ ಪ್ರತ್ಯಕ್ಷ್ಯ ದರ್ಶನವಾಗುತ್ತದೆ ಎನ್ನುವ ಹಲವು ಸುದ್ಧಿಗಳು ಎಲ್ಲೆಡೆ ಕೇಳಿ ಬರುತ್ತದೆ. ಇದೇ ಕಾರಣಕ್ಕಾಗಿಯೇ ಅಯ್ಯಪ್ಪ ಸ್ವಾಮಿಯ ಪ್ರಮುಖ ಕ್ಷೇತ್ರ ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ಮಾತು ಬರದ ಬಾಲಕನೊಬ್ಬ ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಮಾತನಾಡಲು ಶುರು ಮಾಡಿದ ಪವಾಡ ಸದೃಶ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಪ್ರಸನ್ನ ಇದೀಗ ಮಾತನಾಡುವ ಮೂಲಕ ಅಯ್ಯಪ್ಪನ ಪವಾಡಕ್ಕೆ ಸಾಕ್ಷಿಯಾಗಿದ್ದಾರೆ.
ಒಂದು ಶಬ್ದವನ್ನೂ ಸರಿಯಾಗಿ ಮಾತನಾಡದ ಪುತ್ತೂರು ನಿವಾಸಿ ಪ್ರಸನ್ನ ಎನ್ನುವ ಈ ಬಾಲಕ ಕಳೆದ ವರ್ಷ ಕರುಣಾಮಯಿ ಅಯ್ಯಪ್ಪ ಭಕ್ತವೃಂದ ಪುತ್ತೂರು ಇವರ ತಂಡದಲ್ಲಿ ಅಯ್ಯಪ್ಪ ಮಾಲೆ ಹಾಕಿ ನಲವತ್ತೆಂಟು ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆ ಏರಿದ್ದರು. ಸುಮಾರು 48 ಮೈಲು ದುರ್ಗಮ ಕಾಡಿನ ಹಾದಿಯಲ್ಲಿ ಸಾಗಿ ಸ್ವಾಮಿ ದರ್ಶನವನ್ನು ಪಡೆದು ಬಂದ ಬಳಿಕ ಮಾತನಾಡಲು ಶುರು ಮಾಡಿದ್ದಾನೆ. ಇದು ಅಯ್ಯಪ್ಪನ ಪವಾಡವೆಂದು ಸ್ಥಳೀಯರು ಹೇಳುತ್ತಿದ್ದಾರೆ.
ಮಾತನಾಡಲು ಕಷ್ಟಪಡುತ್ತಿದ್ದ ಪ್ರಸನ್ನ ಮಾತನಾಡಲು ಶುರು ಮಾಡಿದ ಬಳಿಕ ಅಯ್ಯಪ್ಪ ಸ್ವಾಮಿಯ ಶರಣು ಎಂದು ಕರೆಯುತ್ತಿದ್ದಾನೆ.ಈ ಬಾರಿ ಪ್ರಸನ್ನ ಮತ್ತೊಮ್ಮೆ ಅಯ್ಯಪ್ಪನ ಮಾಲೆ ಧರಿಸಿದ್ದು, ಶಬರಿ ಮಲೆಗೆ ಹೋಗಲು ಸಿದ್ದರಾಗಿದ್ದಾರೆ.
ಮೊದಲ ಬಾರಿಗೆ ಮಾಲೆ ಧರಿಸಲು ಬಂದಾಗ ಕೇಳಲು ಮತ್ತು ಮಾತನಾಡಲು ಆಗದ ಸ್ಥಿತಿಯಲ್ಲಿದ್ದ ಪ್ರಸನ್ನನಿಗೆ ಇದೀಗ ಒಂದು ಕಿವಿ ಕೇಳಿಸುತ್ತಿದೆ. ಮಾತನಾಡಲು ಶಬ್ದಗಳು ಹೊರಡುತ್ತಿದೆ.
ಮೊದಲ ಬಾರಿಗೆ ಮಾಲೆ ಹಾಕಲು ಬಂದ ಸಂದರ್ಭದಲ್ಲಿ ಕೈ ಸನ್ನೆಯ ಮೂಲಕ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಪ್ರಸನ್ನ ಬಾಯಲ್ಲಿ ಮಾತನಾಡಲಾರಂಭಿಸಿರುವುದು ಗುರು ಸ್ವಾಮಿಗಳಿಗೆ ಸಂತಸ ತಂದಿದೆ.

