ಬ್ರಹ್ಮಾವರ : ಬ್ರಹ್ಮಾವರ ತಾಲೂಕಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೂತನವಾಗಿ ಸರಕಾರಿ ಕಾಲೇಜವೊಂದನ್ನು ಪ್ರಾರಂಭಿಸಲು ಉನ್ನತ ಶಿಕ್ಷಣ ಸಚಿವರಾದ ಡಾ| ಎಂ.ಸಿ. ಸುಧಾಕರ್ ಅವರನ್ನು ಶಾಸಕ ಯಶ್ಪಾಲ್ ಸುವರ್ಣ ಬೆಳಗಾವಿಯ ಅಧಿವೇಶನದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಬ್ರಹ್ಮಾವರ ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದರೂ, ಸರಕಾರಿ ಕಾಲೇಜುಗಳಿಲ್ಲದೆ, ಹಲವಾರು ವಿದ್ಯಾರ್ಥಿಗಳು ಬೇರೆ ಭಾಗಕ್ಕೆ ಪದವಿ ಶಿಕ್ಷಣಕ್ಕಾಗಿ ಹೋಗಬೇಕಾದ ಸ್ಥಿತಿಯಿದೆ.
ಹಾಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬ್ರಹ್ಮಾವರ ತಾಲೂಕಿಗೊಂದು ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಪದವಿ ಕಾಲೇಜು ಮತ್ತು ನರ್ಸಿಂಗ್ ಕಾಲೇಜು ಮಂಜೂರಾತಿ ಮಾಡುವಂತೆ ಉನ್ನತ ಶಿಕ್ಷಣ ಸಚಿವರಿಗೆ ಶಾಸಕರು ಮನವಿ ಸಲ್ಲಿಸಿದ್ದಾರೆ.
ಉಡುಪಿ ಬಾಲಕಿಯರ ಪ.ಪೂ. ಕಾಲೇಜು, ಅಜ್ಜರಕಾಡು ಡಾ| ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಟ್ಟಡಗಳ ನಿರ್ಮಾಣ, ಶೌಚಾಲಯ, ಪ್ರಯೋಗಾಲಯ, ಕಂಪ್ಯೂಟರ್ಲ್ಯಾಬ್ ನಿರ್ಮಾಣ ಸಹಿತ ಹಲವು ಮೂಲಭೂತ ಸೌಕರ್ಯಗಳಿಗೆ ಬೇಡಿಕೆ ಸಲ್ಲಿಸಿದ್ದು, ಕಾಮಗಾರಿಗಳಿಗೆ 1 ಕೋಟಿ ವಿಶೇಷ ಅನುದಾನವನ್ನು ಮಂಜೂರು ಮಾಡುವಂತೆ ಸಚಿವರಲ್ಲಿ ಮನವಿ ಮಾಡಲಾಗಿದೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಕ್ರಮ ವಹಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ ಎಂದು ಶಾಸಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

