ಕಾಪು:- ಸಾವಿರ ಸೀಮೆಯ ಒಡತಿ ಎಂದೇ ಪೂಜಿಸಲ್ಪಡುವ ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕಾಪು ಮಾರಿಯಮ್ಮ ದೇಗುಲದ ಜೀರ್ಣೋದ್ಧಾರ ಕಾರ್ಯ ಬಲು ಬಿರುಸಿನಿಂದ ಸಾಗುತ್ತಿದೆ. ಇನ್ನೇನು ಫೆಬ್ರವರಿ ಇಪ್ಪತ್ತೈದರಿಂದ ಮಾರ್ಚ್ ಐದರವರೆಗೆ ಇಲ್ಲಿ ಬ್ರಹ್ಮಕಲಶೋತ್ಸವ ಮತ್ತು ಇತರ ಧಾರ್ಮಿಕ ವಿಧಿ ವಿಧಾನಗಳು ಅತ್ಯಂತ ಅದ್ಧೂರಿಯಾಗಿ ನೆರವೇರಲಿದೆ.

ಮಾರ್ಚ್ ಐದರ ಕಾರ್ಯಕ್ರಮದಲ್ಲಿ ಕರ್ನಾಟಕದ ಸಿಎಂ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೇಗುಲಕ್ಕೆ ಭೇಟಿ ಕೊಡಲಿದ್ದಾರೆ. ಈಗಾಗಲೇ ಸಾವಿರಾರು ದಾನಿಗಳು, ಉದ್ಯಮಿಗಳು, ಸೆಲೆಬ್ರೆಟಿಗಳು ಆರ್ಥಿಕವಾಗಿ ಸೇವೆ ನೀಡಿದ್ದು ಮುಂದಿನ ದಿನಗಳಲ್ಲಿ ಕಾಪು ಮಾರಿಯಮ್ಮನ ದೇವಸ್ಥಾನ ಆಕರ್ಷಕವಾಗಿ ಕಂಗೊಳಿಸಲಿವೆ. ಕೊರಂಗ್ರಪಾಡಿ ವೇದಮೂರ್ತಿ ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ, ಕ್ಷೇತ್ರದ ಪ್ರಧಾನ ಕುಮಾರಗುರು ತಂತ್ರಿಯ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆಯಲಿದೆ.

ಫೆ.ಇಪ್ಪತ್ತೈದರಿಂದ ವಿಶೇಷ ಪೂಜೆ, ವನದುರ್ಗಾ, ಮಹಾಸುದರ್ಶನಯಾಗ, ಸ್ವರ್ಣಪೀಠದಲ್ಲಿ ಉಚ್ಚಂಗಿದೇವಿಯ ಮೂರ್ತಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಒಂಭತ್ತು ದಿನವೂ ಅನ್ನಸಂತರ್ಪಣೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನೆರವೇರಲಿದೆ.






