ಮಂಗಳೂರು: 2018ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಆರೋಪಿತ ವ್ಯಕ್ತಿಗಳ ವಿರುದ್ದ ಯಾವುದೇ ಕ್ರಮ ನಡೆದಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿ ಸಂಘಟನೆ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ.
ಅದರಂತೆ ರಾಷ್ಟ್ರೀಯ ಮಹಿಳಾ ಆಯೋಗ ಮಂಗಳೂರು ವಿವಿ ಗೆ ನೋಟಿಸ್ ನೀಡಿ ಜೂ.3ರಂದು “ಆನ್ಲೈನ್’ ಮೂಲಕ ತನಿಖೆಗೆ ಹಾಜರಾಗುವಂತೆ ವಿವಿ ಆಡಳಿತಕ್ಕೆ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
2018 ರಲ್ಲಿ ಪ್ರಾಧ್ಯಾಪಕರೊಬ್ಬರ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳ ಆರೋಪ ವಿಷಯದಲ್ಲಿ ಅಂದಿನ ಅಧಿಕಾರಿಗಳು ಆರೋಪ ಕೇಳಿಬಂದವರ ಪರವಾಗಿ ಸಹಾಯ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಘಟನೆ ಸಂಬಂಧ ಯಾವುದೇ ಕ್ರಮ ಆಗಿಲ್ಲ ಎಂದು ಆರೋಪಿಸಿ ಎಬಿವಿಪಿ ದೂರು ನೀಡಿತ್ತು.

