ಬಂಟ್ವಾಳ: ಕೇರಳದ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿ ಕೇರಳ ನಿವಾಸಿ ಮುಹಮ್ಮದ್ ರಾಝಿಕ್ ಎಂಬಾತನ ಕಾರು ಮಂಚಿಯಲ್ಲಿ ಇನ್ನೊಂದು ಕೇರಳ ಮೂಲದ ಕಾರಿಗೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಕೇರಳ ರಾಜ್ಯದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಆರೋಪಿಯಾಗಿರುವ ಈತ ಹಳೆಯ ಆರೋಪಿ ಕೂಡ ಆಗಿದ್ದ ಎನ್ನಲಾಗಿದೆ. ಹಾಗಾಗಿ ಪೊಲೀಸರ ತಂಡ ಈತನನ್ನು ಬಂಧನಕ್ಕೆ ಬಲೆ ಬೀಸಿತ್ತು. ಮಂಗಳವಾರ ಮಧ್ಯಾಹ್ನ ಈತನ ಕಾರು ಬಂಟ್ವಾಳದ ಕಡೆ ಹೋಗುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಕೇರಳ ಪೊಲೀಸರ ತಂಡ ಈತನ ಬೆನ್ನಟ್ಟಿದ್ದರು ಎಂದು ಹೇಳಲಾಗಿದೆ.
ಪೊಲೀಸರು ಬೆನ್ನಟ್ಟಿದ್ದ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಅತೀ ವೇಗವಾಗಿ ಕಾರು ಚಲಾಯಿಸಿ ಮಂಚಿಯ ಮೋಂತಿಮಾರು ಎಂಬಲ್ಲಿ ಕೇರಳ ಮೂಲದ ಆಲ್ಟೊ ಕಾರೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ.
ಆದರೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

