ಬ್ರಹ್ಮಾವರ: ಕಳಪೆ ಗುಣಮಟ್ಟದ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದು ಸಹಕಾರಿ ಸಂಘಕ್ಕೆ ಆರ್ಥಿಕ ನಷ್ಟ ಉಂಟುಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ (ನಿ) ಕೊಕ್ಕರ್ಣೆ ಶಾಖೆಯ ವ್ಯವಸ್ಥಾಪಕಿ ಸುರೇಖಾ ಕುಮಾರಿ (39) ಅವರು ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಯಶವಂತ ಕುಮಾರ್ ಎಂದು ಗುರುತಿಸಲಾಗಿದೆ.
ದೂರಿನ ಪ್ರಕಾರ, ಜುಲೈ 24, 2025ರಂದು ಯಶವಂತ ಕುಮಾರ್ ಸಂಘದ ಶಾಖೆಗೆ ಭೇಟಿ ನೀಡಿ, ನಾಲ್ಕು ಬಳೆಗಳು ಹಾಗೂ ಒಂದು ಎಳೆ ಚೈನ್ ಸೇರಿ ಒಟ್ಟು 69.400 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆಯಲು ವಿನಂತಿಸಿದ್ದರು. ಸಂಘದ ಅಪ್ರೈಸರ್ ಕೆ. ಭಾಸ್ಕರ ಆಚಾರ್ಯ ಅವರು ಆಭರಣಗಳನ್ನು ಪರಿಶೀಲಿಸಿ ₹5,20,500 ರಷ್ಟು ಸಾಲ ನೀಡಬಹುದೆಂದು ದೃಢೀಕರಿಸಿದ್ದರು. ಅದರ ಆಧಾರದ ಮೇಲೆ ₹4,60,000 ಸಾಲ ನೀಡಲಾಯಿತು.
ಆದರೆ ಕೆಲವು ದಿನಗಳ ಬಳಿಕ ಚಿನ್ನಾಭರಣಗಳನ್ನು ಮರುಪರಿಶೀಲಿಸಿದಾಗ ಅವುಗಳ ಗುಣಮಟ್ಟ ಅಲ್ಪವಾಗಿದೆ ಎಂದು ಅಪ್ರೈಸರ್ ತಿಳಿಸಿದ್ದಾರೆ. ಈ ನಂತರದಿಂದ ಆರೋಪಿಯು ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಯಶವಂತ ಕುಮಾರ್ ಕಡಿಮೆ ಗುಣಮಟ್ಟದ ಚಿನ್ನಾಭರಣಗಳನ್ನು ಅಡವಿಟ್ಟು ಸಂಘದ ನಂಬಿಕೆಗೆ ದ್ರೋಹ ಮಾಡಿದ ಆರೋಪವಿದ್ದು, ಈ ಕೃತ್ಯದಲ್ಲಿ ಉಮಾನಾಥ ಶೆಟ್ಟಿ ಎಂಬಾತನೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 224/2025 ಅಡಿ ಭಾರತೀಯ ನ್ಯಾ. ಸಂಹಿತೆಯ ಕಲಂ 316(2), 318 R/W 3(5) BNS ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

