ಬಜ್ಪೆ : ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜ್ಪೆ ಎಡಪದವು ಎಂಬಲ್ಲಿ ಯುವಕನೋರ್ವನ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ.
ಎಡಪದವು ಪೂಪಾಡಿ ಕಲ್ಲು ನಿವಾಸಿ ಅಖಿಲೇಶ್ ತಲವಾರು ದಾಳಿಗೆ ಒಳಗಾದ ಯುವಕನೆಂದು ತಿಳಿದು ಬಂದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ಸಂಜೆ ಈ ಕೃತ್ಯ ನಡೆದಿದ್ದು ಸ್ಥಳಕ್ಕೆ ಬಜ್ಪೆ ಪೊಲೀಸರ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಒಂದೇ ಬೈಕಿನಲ್ಲಿ ನಾಲ್ವರು ಕುಳಿತುಕೊಂಡು, ಕೈಯಲ್ಲಿ ಚೂರಿ ಹಿಡಿದುಕೊಂಡು ಸಾಗುತ್ತಿದ್ದುದ್ದನ್ನು ಅಖಿಲೇಶ್ ನೋಡಿದ್ದರು.
ಈ ಕುರಿತು ವಿಡಿಯೊ ಚಿತ್ರೀಕರಿಸಲು ಅವರನ್ನು ಹಿಂಬಾಲಿಸಿದ್ದರು. ಬೈಕಿನಲ್ಲಿ ಸಾಗುತ್ತಿದ್ದ ಕಿಡಿಗೇಡಿಗಳು ಅಖಿಲೇಶ್ ಅವರತ್ತ ಚೂರಿ ಬೀಸಿದ್ದು, ಅವರ ಕೈಗಳಿಗೆ ಗಾಯಗಳಾಗಿವೆ.
ಆ ನಾಲ್ವರು ಆರೋಪಿಗಳಲ್ಲಿ ಒಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನುಳಿದ ಮೂವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಖಿಲೇಶ್ ಅವರನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಕೈಗೆ ಬಲವಾದ ಗಾಯವಾಗಿದ್ದು ಪ್ರಾಣಾಪಾಯವಾಗಿಲ್ಲ ಎನ್ನಲಾಗಿದೆ. ಪ್ರಕರಣ ದಾಖಲಿಸಿರುವ ಬಜ್ಪೆ ಪೊಲೀಸರು ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
