ಮಂಗಳೂರು: ಕೋಮುಸಂಘರ್ಷ ದ.ಕ.ಜಿಲ್ಲೆಗೆ ಕೆಟ್ಟ ಹೆಸರು ನೀಡಿದಷ್ಟು ಇಲ್ಲಿನ ಕೋಮುಸಾಮರಸ್ಯ ಸುದ್ದಿಯಾಗುವುದಿಲ್ಲ, ಸದ್ದು ಮಾಡುವುದಿಲ್ಲ. ಅಜಿಲಮೊಗರು ಉರೂಸ್ ಕೂಡಾ ಇಂತಹದ್ದೇ ಕೋಮು ಸೌಹಾರ್ದತೆಗೆ ಸಾಕ್ಷಿಯೆನಿಸಿದೆ. ಏನಿದರ ವಿಶೇಷವೆನ್ನುವುದಕ್ಕೆ ಈ ಸುದ್ದಿ ನೋಡಿ.
ಬಂಟ್ವಾಳದ ಅಜಿಲಮೊಗರು ಜುಮ್ಮಾ ಮಸೀದಿಯಲ್ಲಿ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾರ ಹೆಸರಿನಲ್ಲಿ ಮಾಲಿದಾ ಉರೂಸ್ ನಡೆಯುತ್ತದೆ. ಈ ಉರೂಸ್ನಲ್ಲಿ ನೀಡುವ ಮಾಲಿದಾ ಎಂಬ ವಿಶೇಷ ಹರಕೆಯ ಪ್ರಸಾದವೇ ಕೋಮು ಸೌಹಾರ್ದತೆಯ ಕೊಂಡಿಯೆನಿಸಿದೆ.
ಮಾಲಿದಾ ಎಂದರೆ ಅಕ್ಕಿ, ಬೆಲ್ಲ ಮತ್ತು ತುಪ್ಪ ಮಿಶ್ರಿತ ಸಿಹಿಯಾದ ಪಾಕದಿಂದ ದಪ್ಪವಾಗಿ ತಯಾರಿಸಿದ ವಿಶೇಷ ಅಕ್ಕಿರೊಟ್ಟಿ. ಇದು ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾರಿಗೆ ಪ್ರಿಯವಾದ ಸಿಹಿತಿಂಡಿ. ಮಾಲಿದಾವನ್ನು ಮಸೀದಿಯಿಂದಲೇ ತಯಾರಿಸಿ ಪ್ರಸಾದವಾಗಿ ಹಂಚಲಾಗುತ್ತದೆ. ಎರಡನೇ ಹಂತದಲ್ಲಿ ಊರ, ಪರವೂರಿನ ಮುಸ್ಲಿಮರಲ್ಲದೆ, ಹಿಂದೂಗಳು ತಮ್ಮ ಮನೆಯಲ್ಲಿ ತಯಾರಿಸಿ ತಂದ ಮಾಲಿದಾವನ್ನು ಮಸೀದಿಗೆ ಹರಕೆಯಾಗಿ ಸಲ್ಲಿಸುತ್ತಾರೆ. ಇದನ್ನು ಮಸೀದಿಯಲ್ಲಿಟ್ಟು ಉರೂಸ್ಗೆ ಬಂದ ಹಿಂದೂ-ಮುಸ್ಲಿಂ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ.
ಮಾಲಿದ ಪ್ರಸಾದವನ್ನು ಒಂದು ವರ್ಷಗಳವರೆಗೆ ಶೇಖರಿಸಿಡಲಾಗುತ್ತದೆ. ರೋಗರುಜಿನಗಳು, ಸಂಕಷ್ಟಗಳು ಎದುರಾದರೆ ಪಲ್ಲಿ ಶೇಖ್ರನ್ನು ನೆನೆದು ಈ ಪ್ರಸಾದವನ್ನು ಸ್ವೀಕರಿಸಿದರೆ ಸಾಕು ರೋಗ, ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂಬುದು ಹಿಂದೂ-ಮುಸ್ಲಿಂ ಭಕ್ತರ ನಂಬಿಕೆ.
ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ ಅಪಘಾನಿಸ್ತಾನ- ಪರ್ಷಿಯನ್ ಗಡಿ ಪ್ರದೇಶದ ರಾಜ್ಯವೊಂದರ ರಾಜರಾಗಿದ್ದರು. ಲೌಕಿಕ ಬದುಕು ತ್ಯಜಿಸಿದ ಅವರು ವಿಶ್ವ ಸಂಚಾರ ನಡೆಸುತ್ತಾ ಅಜಿಲಮೊಗರುವಿಗೆ 800ವರ್ಷಗಳ ಹಿಂದೆ ಬಂದಿದ್ದರು. ಬಳಿಕ ಅವರು ಇಲ್ಲಿಯೇ ಮಸೀದಿಯನ್ನು ಸ್ಥಾಪಿಸಿದ್ದರು. ಈ ಮಸೀದಿಯೇ ಕೋಮು ಸೌಹಾರ್ದತೆಯ ಕೊಂಡಿಯಾಗಿದೆ.
ಇಲ್ಲಿನ ಉರೂಸ್ ಮುಸ್ಲಿಮರಿಗೆ ಮಾತ್ರವಲ್ಲ ಎಲ್ಲಾ ಧರ್ಮೀಯರಿಗೂ ಹಬ್ಬವಾಗಿದೆ. ಅಜಿಲಮೊಗರುವಿನಿಂದ ಮದುವೆಯಾಗಿ ಹೋದ ಹಿಂದೂ ಮಹಿಳೆಯರು ಉರೂಸ್ಗೆ ತವರು ಮನೆಗೆ ಬರುವುದಿದೆ. ಇಂತಹ ವಿಶೇಷಗಳೇ ದ.ಕ.ಜಿಲ್ಲೆಯ ಕೋಮುಸೌಹಾರ್ದತೆಯ ಸೌಂದರ್ಯವೆನಿಸಿದೆ.
