ಮೂಡುಬಿದರೆ: ಮೂಡುಮೂರ್ನಾಡು ಗ್ರಾಮದ ಹೊಯಿಪಾಲಬೆಟ್ಟು ಎಂಬಲ್ಲಿ ಅಕ್ರಮ ಕೋಳಿ ಅಂಕಕ್ಕೆ ದಾಳಿ ನಡೆಸಿದ ಮೂಡುಬಿದಿರೆ ಪೊಲೀಸರು 6 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಮಾ.18ರಂದು ಶ್ರೀ ಕೋಡಮಣಿತ್ತಾಯ ಹಾಗೂ ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆಯು ಮುಗಿದ ಬಳಿಕ ರಾಜೇಂದ್ರ ಪೂಜಾರಿ ಹಾಗೂ ರಾಜೇಶ್ ಬಲ್ಲಾಳ್ ಎಂಬವರ ನೇತೃತ್ವದಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ಸೇರಿಕೊಂಡು ಕೋಳಿಗಳಿಗೆ ಹರಿತವಾದ ಬಾಲ್ ಗಳನ್ನು ಕಟ್ಟಿ ಹಿಂಸಾತ್ಮಕವಾಗಿ ಕಾದಾಡಲು ಬಿಟ್ಟು ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ಈ ಕುರಿತು ಮಾಹಿತಿ ತಿಳಿದು ದಾಳಿ ಮಾಡಿದ ಪೊಲೀಸರು ಶ್ರೀ ಕೋಡಮಣಿತ್ತಾಯ ಹಾಗೂ ಬ್ರಹ್ಮ ಬೈದರ್ಕಳ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸಹಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ ಪಣಕ್ಕಿಟ್ಟಿದ್ದ 1,480 ರೂ., 17 ಜೀವಂತ ಹುಂಜಗಳು ಮತ್ತು ಕೋಳಿ ಅಂಕಕ್ಕೆ ಬಳಸುವ ಎರಡು ಬಾಲುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

