ಮಂಗಳೂರು: ಮಣ್ಣಗುಡ್ಡೆ ಸಮೀಪದ ಪೆಟ್ರೋಲ್ ಬಂಕ್ವೊಂದರಲ್ಲಿ ಗುರುವಾರ ತಡರಾತ್ರಿ ಯುವಕರ ತಂಡಗಳ ನಡುವೆ ತೀವ್ರ ಘರ್ಷಣೆ ನಡೆದಿದ್ದು, ಹಲ್ಲೆಯ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಕಿಡಿಗೇಡಿಗಳ ಗುಂಪೊಂದು ಪರಸ್ಪರ ವಾಗ್ವಾದಕ್ಕಿಳಿದು, ನಂತರ ಕೈಕೈ ಮಿಲಾಯಿಸಿ ಸಾರ್ವಜನಿಕ ಸ್ಥಳದಲ್ಲಿ ಆತಂಕ ಸೃಷ್ಟಿಸಿದೆ.
ಘಟನೆಯಲ್ಲಿ ಕೆಲವು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮಣ್ಣಗುಡ್ಡೆ ಯ ಪೆಟ್ರೋಲ್ ಬಂಕ್ಗೆ ಇಂಧನ ತುಂಬಿಸಲು ಬಂದಿದ್ದ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ ಎನ್ನಲಾಗಿದೆ. ಆರಂಭದಲ್ಲಿ ಮಾತಿನ ಚಕಮಕಿ ನಡೆದಿದ್ದು, ಆರಂಭದಲ್ಲಿ ಸಿಬ್ಬಂದಿ ಹಲ್ಲೆ ನಡೆಸಿದ ಎನ್ನಲಾಗಿದೆ. ಬಳಿಕ ಕಚೇರಿ ಒಳಗೆ ಆಗಮಿಸಿದ ಯುವಕರು ಹಲ್ಲೆ ನಡೆಸಿದ್ದಾರೆ, ಹಿಗ್ಗಾಮುಗ್ಗ ಥಳಿಸಿದ್ದಾರೆ.

ಈ ವೇಳೆ ಪೆಟ್ರೋಲ್ ಬಂಕ್ ನಲ್ಲಿದ್ದ ಸಿಬ್ಬಂದಿ ಮತ್ತು ಇತರ ಗ್ರಾಹಕರು ಭಯಭೀತರಾಗಿದ್ದರು.
ಪೆಟ್ರೋಲ್ ಬಂಕ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಹಲ್ಲೆಯ ದೃಶ್ಯಗಳು ಸಂಪೂರ್ಣವಾಗಿ ದಾಖಲಾಗಿವೆ. ಯುವಕರು ಎಳೆದಾಡಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ಪೊಲೀಸರು, ಗಲಾಟೆಯಲ್ಲಿ ಭಾಗಿಯಾದ ಯುವಕರ ಪತ್ತೆಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.

