ಬ್ರಹ್ಮಾವರ: ಯಡ್ತಾಡಿ ಗ್ರಾಮದ ಗರಿಕೆಮಠ ಸಮೀಪದ ಕಲ್ಲು ಕೋರೆಯ ಗುಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ತಮಿಳುನಾಡು ಮೂಲದ ಕಾರ್ಮಿಕ ತಂಗವೇಲು ಕಲ್ಲು ಕೋರೆಯಲ್ಲಿ ಕಲ್ಲು ಒಡೆಯುವ ಕೆಲಸ ಮಾಡಿಕೊಂಡಿದ್ದು ಅವರ ಚಿಕ್ಕಪ್ಪನ ಮಗ ಅರುಣನು ಸಮೀಪದ ಕಲ್ಲುಕೋರೆಯ ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ.
ಕಲ್ಲು ಕೋರೆಯಲ್ಲಿ ಕಲ್ಲು ತೆಗೆದ ಪರಿಣಾಮ ಸ್ಥಳದಲ್ಲಿ ಗುಂಡಿ ಉಂಟಾಗಿ ಮಳೆ ನೀರು ನಿಂತು ಸುಮಾರು 20 ಅಡಿ ನೀರು ಇದ್ದು, ಇದಕ್ಕೆ ಯಾವುದೇ ತಡೆಬೇಲಿ, ಸೂಚನಾ ಫಲಕ ಇರುವುದಿಲ್ಲ. ಕೆಲಸಗಾರರು ಅಲ್ಲೇ ಪಕ್ಕದಲ್ಲಿ ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದು ನೀರು ನಿಂತ ಸ್ಥಳಕ್ಕೆ ತಡೆ ಬೇಲಿ ಹಾಕಿ ಸೂಚನಾ ಫಲಕವನ್ನು ಅಳವಡಿಸಿ ಕ್ರಮ ವಹಿಸಿದ್ದರೆ ಅರುಣನ ಸಾವು ಸಂಭವಿಸುತ್ತಿರಲಿಲ್ಲ. ಕಲ್ಲು ಕೋರೆಯನ್ನು ನಡೆಸುವ ಬಶೀರ್, ಶರತ್ ಶೆಟ್ಟಿ ಮತ್ತು ಇತರರು ನಿರ್ಲಕ್ಷತನ ತೋರಿಸಿದ್ದರಿಂದ ಸ್ಥಳದಲ್ಲಿ ಸ್ನಾನಕ್ಕೆಂದು ನೀರಿಗೆ ಇಳಿದ ಅರುಣ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ ಎಂಬುದಾಗಿ ನೀಡಿದ ದೂರಿನಂತೆ ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ: 54/2026 ಕಲಂ: 106(1) ಜೊತೆಗೆ 34 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

