ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿದೆಯೇ? ಆತಂಕ ಬೇಡ. ಕೇವಲ 15 ದಿನಗಳಲ್ಲಿ ಹೊಸ ಕಾರ್ಡ್ ಪಡೆಯಬಹುದು. ಬಿಪಿಎಲ್ ಕಾರ್ಡ್ ರದ್ದಾದರೆ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಇತ್ತೀಚೆಗೆ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗುತ್ತಿರುವ ಸುದ್ದಿಗಳು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿವೆ. ತಮ್ಮ ಕಾರ್ಡ್ ರದ್ದಾಗಿಬಿಡುತ್ತದಾ? ಸರ್ಕಾರಿ ಸೌಲಭ್ಯಗಳು ನಿಂತು ಹೋಗುತ್ತವಾ? ಎಂಬ ಭಯ ಬಡವರನ್ನು ಕಾಡುತ್ತಿದೆ.
ಆದರೆ, ಹೊಸ ಕಾರ್ಡ್’ಗಾಗಿ ಕಾಯುತ್ತಿರುವ ಮತ್ತು ಕಾರ್ಡ್ ರದ್ದಾಗಿದೆ ಎಂದು ಚಿಂತಿಸುತ್ತಿರುವ ಜನಸಾಮಾನ್ಯರಿಗೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಒಂದು ದೊಡ್ಡ ರಿಲೀಫ್ ನೀಡಿದ್ದಾರೆ.
ಕೇವಲ 15 ದಿನಗಳಲ್ಲಿ ಮರಳಿ ಕಾರ್ಡ್
ಬಡವರ ಹಕ್ಕು ಕಸಿದುಕೊಳ್ಳುವುದು ಸರ್ಕಾರದ ಉದ್ದೇಶವಲ್ಲ. ಯಾವುದೇ ನಿಜವಾದ ಹಾಗೂ ಅರ್ಹ ಫಲಾನುಭವಿಯ ಬಿಪಿಎಲ್ ಕಾರ್ಡ್ ರದ್ದಾಗಿಲ್ಲ.
ಒಂದು ವೇಳೆ ತಾಂತ್ರಿಕ ದೋಷ ಅಥವಾ ಇನ್ನಾವುದೇ ಕಾರಣದಿಂದ ಅರ್ಹರ ಕಾರ್ಡ್ ರದ್ದಾಗಿದ್ದರೂ, ಕೇವಲ 15 ದಿನಗಳ ಒಳಗಾಗಿ ಅವರಿಗೆ ಮರಳಿ ಕಾರ್ಡ್ ಒದಗಿಸಲಾಗುವುದು ಎಂದು ಆಹಾರ ಸಚಿವರು ದೃಢವಾದ ಭರವಸೆ ನೀಡಿದ್ದಾರೆ.
ಏಪ್ರಿಲ್ 9ರಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ನಡೆಯುತ್ತಿರುವ ರೇಷನ್ ಕಾರ್ಡ್ ಪರಿಷ್ಕರಣೆ ಕುರಿತಾದ ಎಲ್ಲಾ ಗೊಂದಲಗಳಿಗೂ ಸ್ಪಷ್ಟ ಉತ್ತರ ನೀಡಿದ್ದಾರೆ.
ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಏನು ಮಾಡಬೇಕು?
- ನೇರವಾಗಿ ನಿಮ್ಮ ತಾಲೂಕಿನ ‘ತಹಶೀಲ್ದಾರ್ ಕಚೇರಿಗೆ’ ಭೇಟಿ ನೀಡಿ.
- ಅಲ್ಲಿ ನಿಮ್ಮ ಅಗತ್ಯ ದಾಖಲೆಗಳನ್ನು ನೀಡಿ, ಮರುಪರಿಶೀಲನೆಗಾಗಿ ಹೊಸದಾಗಿ ಅರ್ಜಿ ಸಲ್ಲಿಸಿ.
- ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಹಾಗೂ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ .
- ನೀವು ನಿಜಕ್ಕೂ ಸರ್ಕಾರದ ನಿಯಮಾವಳಿಗಳ ಪ್ರಕಾರ ಅರ್ಹರು ಎಂದು ದೃಢಪಟ್ಟರೆ, ಕೇವಲ 15 ದಿನಗಳ ಒಳಗಾಗಿ ನಿಮಗೆ ಹೊಸ ಬಿಪಿಎಲ್ ಕಾರ್ಡ್ ವಿತರಿಸಲಾಗುತ್ತದೆ .
ಈ ಬಗ್ಗೆ ಈಗಾಗಲೇ ವಿಧಾನಸೌಧದ ಅಧಿವೇಶನದಲ್ಲೂ ಸರ್ಕಾರ ಅಧಿಕೃತವಾಗಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಸರ್ಕಾರ ಈ ಪರಿಷ್ಕರಣೆ (Revision) ಯಾಕೆ ಮಾಡುತ್ತಿದೆ?
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವುದು ಸತ್ಯ. ಆದರೆ, ಇದರ ಹಿಂದಿನ ಉದ್ದೇಶ ಬಡವರ ಹೊಟ್ಟೆ ಮೇಲೆ ಹೊಡೆಯುವುದಲ್ಲ, ಬದಲಾಗಿ ಅನರ್ಹರನ್ನು ಪತ್ತೆಹಚ್ಚಿ ನಿಜವಾದ ಬಡವರಿಗೆ ನ್ಯಾಯ ಒದಗಿಸುವುದು. ಸಚಿವರು ಒದಗಿಸಿದ ಬೆಚ್ಚಿಬೀಳಿಸುವ ಅಂಕಿ-ಅಂಶಗಳ ಪ್ರಕಾರ:
ರಾಜ್ಯದಲ್ಲಿ ಬರೋಬ್ಬರಿ 14 ಲಕ್ಷ ಕುಟುಂಬಗಳು ಎಪಿಎಲ್ (APL ) ಕಾರ್ಡ್ ಹೊಂದಲು ಅರ್ಹತೆ ಹೊಂದಿದ್ದರೂ, ಬಿಪಿಎಲ್ ಕಾರ್ಡ್ ಪಡೆದುಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.
ಅನರ್ಹರ ಕಾರ್ಡ್’ಗಳು ಎಪಿಎಲ್ಗೆ ವರ್ಗಾವಣೆ
ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಸೂಚನೆಯಂತೆ , ರಾಜ್ಯ ಸರ್ಕಾರವು ಇಂತಹ ಅನರ್ಹರನ್ನು ಪತ್ತೆ ಹಚ್ಚುವ ಕಾರ್ಯವನ್ನು ಚುರುಕುಗೊಳಿಸಿದೆ.
ಯಾರು ನಿಯಮಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೋ, ಅವರ ಕಾರ್ಡ್ಗಳನ್ನು ರದ್ದುಪಡಿಸುವ ಬದಲು ನೇರವಾಗಿ ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸುವ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ.
‘ಈ ಪರಿಷ್ಕರಣೆಯನ್ನು ಅತ್ಯಂತ ನಿಧಾನವಾಗಿ, ಯಾವುದೇ ಅವಸರವಿಲ್ಲದೆ ಹಂತ ಹಂತವಾಗಿ ಮಾಡಲಾಗುತ್ತಿದೆ. ಇದರಿಂದಾಗಿ ಸಮಾಜದ ಕಟ್ಟಕಡೆಯ, ನಿಜವಾದ ಬಡವರಿಗೆ ಹಾಗೂ ಅರ್ಹ ಬಿಪಿಎಲ್ ಕಾರ್ಡ್’ದಾರರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಯಾರೂ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಸಚಿವ ಮುನಿಯಪ್ಪ ಅವರು ಜನಸಾಮಾನ್ಯರಲ್ಲಿ ಮನವಿ ಮಾಡಿದ್ದಾರೆ.

