ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ-ಕಿನ್ನಿಮುಲ್ಕಿ ಸರ್ವಿಸ್ ರಸ್ತೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದು, ಅಪಘಾತಕ್ಕೆ ಕಾರಣವಾದ ದ್ವಿಚಕ್ರ ವಾಹನ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೇ 3ರಂದು ರಾತ್ರಿ ಸುಮಾರು 8:45ರ ಸುಮಾರಿಗೆ ಉದ್ಯಾವರ ಮೂಲದ ಸುಧೀರ್ ಸಾಲ್ಯಾನ್ ಅವರು ತಮ್ಮ ಪತ್ನಿ ಮತ್ತು ಒಂಬತ್ತು ವರ್ಷದ ಮಗಳು ಪ್ರಣೀತಾ ಅವರೊಂದಿಗೆ ಬೈಕಿನಲ್ಲಿ ಅಂಬಲಪಾಡಿ ಜಂಕ್ಷನ್ನಿಂದ ಕಿನ್ನಿಮುಲ್ಕಿ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅಂಬಲಪಾಡಿ ABCO ಸ್ಟೀಲ್ ಬಳಿ ಹಿಂದಿನಿಂದ ಬಂದ ಅಪರಿಚಿತ ದ್ವಿಚಕ್ರ ವಾಹನವೊಂದು ಸುಧೀರ್ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸುಧೀರ್, ಅವರ ಪತ್ನಿ ಮತ್ತು ಮಗು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸುಧೀರ್ ಸಾಲ್ಯಾನ್ ದಂಪತಿಗಳಿಗೆ ತೀವ್ರ ಗಾಯಗಳಾಗಿದ್ದು ಸದ್ಯ ಇವರು ಉಡುಪಿಯ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣ ದ್ವಿಚಕ್ರ ವಾಹನ ಸವಾರನು ಮಾನವೀಯತೆಯನ್ನೂ ಮರೆತು, ಗಾಯಾಳುಗಳಿಗೆ ನೆರವಾಗುವ ಬದಲಿಗೆ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪರಾರಿಯಾದ ಸವಾರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

