ನವದೆಹಲಿ: ದೇಶಾದ್ಯಂತ ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಜನತೆಗೆ ಹವಾಮಾನ ಇಲಾಖೆಯು ಸಿಹಿಸುದ್ದಿಯೊಂದನ್ನು ನೀಡಿದೆ. ಈ ವರ್ಷ ಮುಂಗಾರು ಮಾರುತಗಳು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಭಾರತವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಅಂಡಮಾನ್ ಮಾರುತಗಳ ಆಗಮನ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮೇ 14 ರಿಂದ ಮೇ 16 ರ ನಡುವೆ ಮಾನ್ಸೂನ್ ಮಾರುತಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಲುಪುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಅಂಡಮಾನ್ ದ್ವೀಪಗಳಿಗೆ ಮಾರುತಗಳು ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಕೇರಳಕ್ಕೂ ಮುಂಗಾರು ಕಾಲಿಡಲಿದೆ. ಈ ಕುರಿತು ಅಧಿಕೃತ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ಮೇ ದ್ವಿತೀಯಾರ್ಧದಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.
ಹೆಚ್ಚಾಗಲಿದೆ ಮಳೆಯ ಪ್ರಮಾಣ
ಮೇ ತಿಂಗಳಿನಲ್ಲಿ ದೇಶದಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. 1971 ರಿಂದ 2020 ರವರೆಗಿನ ದತ್ತಾಂಶದ ಪ್ರಕಾರ, ಮೇ ತಿಂಗಳ ದೀರ್ಘಾವಧಿ ಸರಾಸರಿ ಮಳೆ 64.1 ಮಿ.ಮೀ. ಇರುತ್ತದೆ. ಈ ಬಾರಿ ದೀರ್ಘಾವಧಿ ಸರಾಸರಿಗಿಂತ ಶೇ. 110 ರಷ್ಟು ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಮಳೆಯ ಆಗಮನದಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಹಗಲಿನ ತಾಪಮಾನವು ಸರಾಸರಿಗಿಂತ ಕಡಿಮೆಯಾಗುವ ಮೂಲಕ ಜನರಿಗೆ ಬಿಸಿಲಿನಿಂದ ಸ್ವಲ್ಪ ಮಟ್ಟದ ಸಮಾಧಾನ ಸಿಗಲಿದೆ.
ದೇಶದ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದರೂ, ಪೂರ್ವ ಮತ್ತು ಈಶಾನ್ಯ ಭಾರತದ ಕೆಲವು ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಬಹುದು ಎಂದು ಹೇಳಲಾಗಿದೆ. ಈ ಮಳೆ ಕೊರತೆಯು ಬಿತ್ತನೆ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಆತಂಕವಿದೆ. ಮೇ 5 ರವರೆಗೆ ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಈಶಾನ್ಯದ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಮಳೆಯ ಮುನ್ಸೂಚನೆಯ ನಡುವೆಯೂ ಕೆಲವು ರಾಜ್ಯಗಳಲ್ಲಿ ಶಾಖದ ಅಲೆ ಮುಂದುವರಿಯಲಿದೆ.
ದಕ್ಷಿಣ ಹಿಮಾಚಲ ಪ್ರದೇಶ, ಉತ್ತರಾಖಂಡ, ಪೂರ್ವ ಕರಾವಳಿ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಮುಂದಿನ 3 ರಿಂದ 8 ದಿನಗಳ ಕಾಲ ಈ ಭಾಗಗಳಲ್ಲಿ ಶಾಖದ ಅಲೆಯ ತೀವ್ರತೆ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ಮೇ 3 ರಿಂದ ಮೇ 6 ರವರೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

