ಕೋಟ: ಸಾಲವಾಗಿ ಪಡೆದ ಲಕ್ಷಾಂತರ ರೂಪಾಯಿ ಹಣವನ್ನು ಮರುಪಾವತಿಸದೆ, ವಾಪಸ್ ಕೇಳಿದ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನ್ಯಾಯಾಲಯದ ನಿರ್ದೇಶನದಂತೆ ಇದೀಗ ಇಬ್ಬರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
ಬ್ರಹ್ಮಾವರ ತಾಲ್ಲೂಕಿನ ಗುಂಡ್ಮಿ ನಿವಾಸಿ, ವೃತ್ತಿಯಲ್ಲಿ ಈಜು ತರಬೇತುದಾರರಾಗಿರುವ ಗೋಪಾಲ ಖಾರ್ವಿ ಎಂಬುವವರು ತಮ್ಮ ಸಂಬಂಧಿಕರಾದ ರವೀಂದ್ರ ಖಾರ್ವಿ ಮತ್ತು ಪ್ರೀತು ಎಂಬುವವರಿಗೆ ವ್ಯವಹಾರದ ಉದ್ದೇಶಕ್ಕಾಗಿ ಒಟ್ಟು 9,50,000 ರೂ. ಹಣವನ್ನು ನೀಡಿದ್ದರು. ಆರೋಪಿಗಳು ಈ ಮೊತ್ತದ ಪೈಕಿ 6,27,000 ರೂ.ಗಳನ್ನು ವಾಪಸ್ ನೀಡಿದ್ದರೂ, ಬಾಕಿ ಉಳಿದ 3,23,000 ರೂ. ಹಣವನ್ನು ನೀಡದೆ ಸತಾಯಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಣ ವಾಪಸ್ ಕೇಳಿದಾಗ ಆರೋಪಿಗಳು ದಿನದೂಡುತ್ತಾ ಕಾಲಹರಣ ಮಾಡಿದ್ದಾರೆ. ಬಾಕಿ ಹಣ ಕೇಳಲು ಹೋದ ಗೋಪಾಲ ಖಾರ್ವಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಹಣವನ್ನು ವಾಪಸ್ ನೀಡದೆ ನಂಬಿಕೆ ದ್ರೋಹ ಮಾಡುವ ಮೂಲಕ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಿದ್ದರು. ಸಂತ್ರಸ್ತರು ಸಲ್ಲಿಸಿದ ಖಾಸಗಿ ದೂರನ್ನು ಪರಿಶೀಲಿಸಿದ ಮಾನ್ಯ ನ್ಯಾಯಾಲಯವು ಪ್ರಕರಣ ದಾಖಲಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅಪರಾಧ ಕ್ರಮಾಂಕ 77/2026 ರಂತೆ, ಬಿ.ಎನ್.ಎಸ್ (BNS) ಕಾಯ್ದೆಯ ಕಲಂ 316(2), 318(4), 351, 352 ಮತ್ತು 190 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

