ಮುಂಬೈ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನ ಮಹಾರಾಷ್ಟ್ರದ ನಾಸಿಕ್ ಘಟಕದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಅನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ನಿದಾ ಖಾನ್ ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದಳು. ಇದೀಗ ಆಕೆಯನ್ನು ಛತ್ರಪತಿ ಸಂಭಾಜಿನಗರದಲ್ಲಿ ಜಂಟಿ ಕಾರ್ಯಾಚರಣೆಯ ಮೂಲಕ ಬಂಧಿಸಲಾಗಿದೆ.
ನಾಸಿಕ್ ಎಸ್ಐಟಿ (SIT), ಛತ್ರಪತಿ ಸಂಭಾಜಿನಗರ ಪೊಲೀಸ್ ಕಮಿಷನರೇಟ್ ಮತ್ತು ಅಪರಾಧ ವಿಭಾಗದ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ನಿದಾ ಖಾನ್ ಕಳೆದ ನಾಲ್ಕು ದಿನಗಳಿಂದ ಛತ್ರಪತಿ ಸಂಭಾಜಿನಗರದ ನಾರೇಗಾಂವ್ ಪ್ರದೇಶದ ಕೈಸರ್ ಕಾಲೋನಿಯಲ್ಲಿರುವ ಫ್ಲಾಟ್ನಲ್ಲಿ ತನ್ನ ಪೋಷಕರು, ಸಹೋದರ ಮತ್ತು ಚಿಕ್ಕಮ್ಮನೊಂದಿಗೆ ತಂಗಿದ್ದಳು. ಪೊಲೀಸರು ಈ ಫ್ಲಾಟ್ ಮೇಲೆ ಎರಡು ದಿನಗಳಿಂದ ನಿಗಾ ಇಟ್ಟಿದ್ದರು. ಬಂಧನದ ನಂತರ ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ನಾಸಿಕ್ಗೆ ಕರೆದೊಯ್ಯಲಾಗಿದೆ.
ತಾನು ಎರಡು ತಿಂಗಳ ಗರ್ಭಿಣಿ ಎಂದು ಹೇಳಿಕೊಂಡಿದ್ದ ನಿದಾ ಖಾನ್, ಬಂಧನದಿಂದ ರಕ್ಷಣೆ ಕೋರಿ ನಾಸಿಕ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು. ಆದರೆ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯವು ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.
ಟಿಸಿಎಸ್ ಮತಾಂತರ ಮತ್ತು ಕಿರುಕುಳ ಪ್ರಕರಣ ಹಿನ್ನೆಲೆ
ಈ ಇಡೀ ವಿವಾದವು ನಾಸಿಕ್ ಟಿಸಿಎಸ್ ಶಾಖೆಯ ಮಹಿಳಾ ಉದ್ಯೋಗಿಯೊಬ್ಬರು ನೀಡಿದ ದೂರಿನಿಂದ ಬೆಳಕಿಗೆ ಬಂದಿತು. ಸಹೋದ್ಯೋಗಿ ದಾನಿಶ್ ಶೇಖ್ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದ ಎಂದು ಮಹಿಳೆ ಆರೋಪಿಸಿದ್ದರು. ಆದರೆ ದಾನಿಶ್ ಈಗಾಗಲೇ ವಿವಾಹಿತನಾಗಿದ್ದ ಎಂಬ ಅಂಶವನ್ನು ಮುಚ್ಚಿಡಲಾಗಿತ್ತು. ಆರೋಪಿ ನಿದಾ ಖಾನ್ ಈ ದಾನಿಶ್ ಶೇಖ್ನ ಸಹೋದರಿಯಾಗಿದ್ದು, ದೂರುದಾರ ಮಹಿಳೆಯ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ, ಮತಾಂತರವಾಗುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ.
ಪೊಲೀಸ್ ತನಿಖೆ ತೀವ್ರಗೊಂಡಂತೆ, ಇನ್ನೂ ಏಳು ಮಹಿಳಾ ಉದ್ಯೋಗಿಗಳು ಮುಂದೆ ಬಂದು ಹಿರಿಯ ಸಹೋದ್ಯೋಗಿಗಳು ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಕಿರುಕುಳದ ಬಗ್ಗೆ ಮಾನವ ಸಂಪನ್ಮೂಲ ಇಲಾಖೆಗೆ (HR) ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತೆಯರು ತಿಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಆರ್ ಮುಖ್ಯಸ್ಥೆ ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

