ಬ್ರಹ್ಮಾವರ: ವೃದ್ಧ ತಾಯಿಯ ಆರೈಕೆಗಾಗಿ ನಿಯೋಜನೆಗೊಂಡಿದ್ದ ಮನೆಗೆಲಸದಾಕೆಯೇ ವೃದ್ಧ ದಂಪತಿಗಳ ನಂಬಿಕೆ ದ್ರೋಹ ಬಗೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು, ಬಳಿಕ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿತೆಯನ್ನು ಬ್ರಹ್ಮಾವರ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ವಿಜಯನಗರ ಜಿಲ್ಲೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕಣದ ಹಿನ್ನೆಲೆ ಮತ್ತು ದೂರು:
ದೂರುದಾರರ ತಂದೆ ಮತ್ತು ತಾಯಿ ಹೆರೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ತಾಯಿಯವರ ಕಾಲಿನ ಮೂಳೆ ಮುರಿತ (Fracture) ಆಗಿದ್ದರಿಂದ, ಅವರನ್ನು ಪ್ರೀತಿಯಿಂದ ನೋಡಿಕೊಳ್ಳಲು ಹಾಗೂ ಆರೈಕೆ ಮಾಡಲು ಕಳೆದ 2026ರ ಮಾರ್ಚ್ ತಿಂಗಳ ಆರಂಭದಲ್ಲಿ ಲತಾ ಎಂಬಾಕೆಯನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳಲಾಗಿತ್ತು. ದಿನಾಂಕ 01/04/2026 ರಂದು ಮಧ್ಯಾಹ್ನ ಸುಮಾರು 12:00 ಗಂಟೆಯ ವೇಳೆಗೆ ದೂರುದಾರರ ತಂದೆ ಮನೆಯ ಕಪಾಟನ್ನು ತೆರೆದು ನೋಡಿದಾಗ, ಅದರಲ್ಲಿ ಇಟ್ಟಿದ್ದ 25 ಗ್ರಾಂ ತೂಕದ ಚಿನ್ನದ ಬ್ರೇಸ್ಲೈಟ್ ಮತ್ತು 4 ಗ್ರಾಂ ತೂಕದ ಚಿನ್ನದ ಉಂಗುರ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳತನ ಒಪ್ಪಿಕೊಂಡರೂ ನಂಬಿಸಿ ವಂಚನೆ:
ಕಪಾಟಿನಲ್ಲಿದ್ದ ಒಡವೆಗಳು ಕಾಣದಿದ್ದಾಗ ತಕ್ಷಣವೇ ಮನೆಯಲ್ಲಿದ್ದ ಕೆಲಸದಾಕೆ ಲತಾಳನ್ನು ವಿಚಾರಿಸಲಾಗಿದೆ. ಈ ವೇಳೆ ತಾನು ಚಿನ್ನಾಭರಣಗಳನ್ನು ಕದ್ದು ಮುತ್ಥೂಟ್ ಫೈನಾನ್ಸ್ನಲ್ಲಿ ಅಡವಿಟ್ಟಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ, ತಾನೇ ಸ್ವತಃ ಹೋಗಿ ಅಡವಿಟ್ಟ ಚಿನ್ನವನ್ನು ಬಿಡಿಸಿ ತಂದುಕೊಡುವುದಾಗಿಯೂ ನಂಬಿಸಿದ್ದಾಳೆ. ಆಕೆಯ ಮಾತನ್ನು ಸತ್ಯವೆಂದು ನಂಬಿದ ದೂರುದಾರರು ಮತ್ತು ಅವರ ಕುಟುಂಬಸ್ಥರು ಆ ಸಮಯದಲ್ಲಿ ಯಾವುದೇ ಪೊಲೀಸ್ ದೂರನ್ನು ದಾಖಲಿಸಿರಲಿಲ್ಲ. ಆದರೆ, ದಿನಗಳು ಕಳೆದರೂ ಲತಾ ಅಡವಿಟ್ಟ ಚಿನ್ನಾಭರಣಗಳನ್ನು ಬಿಡಿಸಿಕೊಡದೆ ವಂಚಿಸಿದ್ದಾಳೆ. ಅಷ್ಟೇ ಅಲ್ಲದೆ, ಯಾರ ಕೈಗೂ ಸಿಗದೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾಳೆ. ಕಳುವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ಅಂದಾಜು ರೂ. 3,50,000/- (ಮೂರೂವರೆ ಲಕ್ಷ ರೂಪಾಯಿ) ಎಂದು ಅಂದಾಜಿಸಲಾಗಿದೆ. ಇದರಿಂದ ಬೇಸತ್ತ ದೂರುದಾರರು ಕೊನೆಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ಪೋಲಿಸರ ಚಾಣಾಕ್ಷ ನಡೆ – ವಿಜಯನಗರದಲ್ಲಿ ಆರೋಪಿ ಬಂಧನ:
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 80/2026 ರಂತೆ ಪ್ರಕರಣ ದಾಖಲಾಗುತ್ತಿದ್ದಂತೆ ಸಕ್ರಿಯರಾದ ಪೊಲೀಸರು ಆರೋಪಿಗಾಗಿ ಜಾಲ ಬೀಸಿದ್ದರು. ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿತೆ ಲತಾಳ ಪತ್ತೆಗಾಗಿ ಉಡುಪಿ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ (SP) ಶ್ರೀ ಹರಿರಾಮ ಶಂಕರ್, ಐ.ಪಿ.ಎಸ್. ಹಾಗೂ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ (ASP) ಶ್ರೀ ಸುಧಾಕರ ನಾಯ್ಕ್ ರವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು. ತನಿಖೆಯ ಸುಳಿವುಗಳನ್ನು ಆಧರಿಸಿ ಬ್ರಹ್ಮಾವರ ಪೊಲೀಸ್ ಠಾಣೆಯ ಪ್ರೊಬೇಷನರಿ ಪಿ.ಎಸ್.ಐ. ಆದ ಶ್ರೀಮತಿ ಪ್ರತಿಭಾ, ಪೊಲೀಸ್ ಕಾನ್ಸ್ಟೇಬಲ್ ಶ್ರೀ ಕಿರಣ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಶ್ರೀ ಗುರುಕಿರಣ್ ಅವರನ್ನೊಳಗೊಂಡ ತಂಡವು ಅತ್ಯಂತ ದಕ್ಷತೆ ಮತ್ತು ಚಾಣಾಕ್ಷತೆ ಪ್ರದರ್ಶಿಸಿ ತನಿಖೆ ಮುಂದುವರಿಸಿತು. ಕೊನೆಗೆ ಆರೋಪಿಯು ವಿಜಯನಗರ ಜಿಲ್ಲೆಯಲ್ಲಿದ್ದಾಳೆಂಬ ನಿಖರ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ ತಂಡ, ಯಶಸ್ವಿಯಾಗಿ ಆಕೆಯನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಿದೆ. ಸದ್ಯ ಆರೋಪಿತೆಯನ್ನು ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆತಂದು ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.
ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಅಭಿನಂದನೆ:
ಅತ್ಯಂತ ಶೀಘ್ರವಾಗಿ ಮತ್ತು ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿತೆಯನ್ನು ಬೇರೆ ಜಿಲ್ಲೆಯಿಂದ ಪತ್ತೆಹಚ್ಚಿ ಬಂಧಿಸಿದ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿ, ಅಭಿನಂದಿಸಿದ್ದಾರೆ.

