ಮಲ್ಪೆ: ಬಾವಿಯ ಬಲೆಯನ್ನು ಸ್ವಚ್ಛಗೊಳಿಸಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಪಡುತೋನ್ಸೆ ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು ಶ್ಯಾಮಲ ಜಿ. ಹೆಗ್ಡೆ (68) ಎಂದು ಗುರುತಿಸಲಾಗಿದೆ. ಪತ್ನಿಯನ್ನು ರಕ್ಷಿಸಲು ಹೋಗಿ ಪತಿ ಕೂಡ ಬಾವಿಗೆ ಬಿದ್ದು ಗಾಯಗೊಂಡಿದ್ದಾರೆ.
ದಿನಾಂಕ 03/06/2026 ರಂದು ಶ್ಯಾಮಲ ಜಿ. ಹೆಗ್ಡೆ ಅವರು ಮನೆಯಲ್ಲಿ ಬಟ್ಟೆ ತೊಳೆಯುತ್ತಿದ್ದರು. ಈ ವೇಳೆ ಬಾವಿಯ ಮೇಲಿದ್ದ ರಕ್ಷಣಾ ಬಲೆಯ ಮೇಲೆ ಕಸ ಬಿದ್ದಿರುವುದನ್ನು ಗಮನಿಸಿ, ಅದನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಆಗ ದುರದೃಷ್ಟವಶಾತ್ ಕಾಲು ಜಾರಿ ತಲೆಕೆಳಗಾಗಿ ಬಾವಿಯ ನೀರಿಗೆ ಬಿದ್ದಿದ್ದಾರೆ.ಶ್ಯಾಮಲ ಅವರು ಬಾವಿಯೊಳಗಿಂದ ಜೋರಾಗಿ ಕೂಗಿಕೊಂಡಾಗ, ಅವರ ಪತಿ ತಕ್ಷಣವೇ ಧಾವಿಸಿ ಬಂದಿದ್ದಾರೆ. ಪತ್ನಿಯನ್ನು ಬದುಕಿಸುವ ಧಾವಂತದಲ್ಲಿ ಬಾವಿಯ ಹಗ್ಗದ ಸಹಾಯದಿಂದ ಒಳಗಿಳಿಯಲು ಪ್ರಯತ್ನಿಸಿದ್ದಾರೆ. ಆದರೆ ದುರದೃಷ್ಟವಶಾತ್ ಹಗ್ಗವು ಮಧ್ಯದಲ್ಲೇ ತುಂಡಾದ ಕಾರಣ, ಅವರೂ ಸಹ ಬಾವಿಯೊಳಗೆ ಬಿದ್ದಿದ್ದಾರೆ.
ಕೂಗಾಟ ಕೇಳಿ ಸ್ಥಳೀಯರು ತಕ್ಷಣ ಧಾವಿಸಿ ಇಬ್ಬರನ್ನೂ ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಈ ವೇಳೆ ಪತಿ ಪ್ರಜ್ಞಾಸ್ಥಿತಿಯಲ್ಲಿದ್ದು ಮಾತನಾಡುತ್ತಿದ್ದರೆ, ತೀವ್ರವಾಗಿ ಅಸ್ವಸ್ಥರಾಗಿದ್ದ ಶ್ಯಾಮಲ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.
ಕೂಡಲೇ ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ಬಳಿಕ ಪತಿ ಗುಣಮುಖರಾಗಿದ್ದಾರೆ. ಆದರೆ ತೀವ್ರ ನಿಗಾ ಘಟಕದಲ್ಲಿದ್ದ ಶ್ಯಾಮಲ 05/06/2026 ರಂದು ಮೃತಪಟ್ಟಿರುತ್ತಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 38/2026, ಕಲಂ: 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

