ನವದೆಹಲಿ: ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಸದುದ್ದೇಶದಿಂದ 2028, ಆ. 1 ರಿಂದ ಎಲ್ಲಾ ವಾಹನಹಳಿಗೂ ವೆಹಿಕಲ್ ಟು ವೆಹಿಕಲ್ (VtoV) ಸಂವಹನ ವ್ಯವಸ್ಥೆ ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದೆ.
ಇದರನ್ವಯ ಅ.1, 2028ರ ಮೊದಲು ಅಥವಾ ನಂತರ ಉತ್ಪಾದನೆಯಾಗುವ ಎಲ್, ಎಂ ಮತ್ತು ಎನ್ ಕೆಟಗರಿಯ ವಾಹನಗಳಿಗೆ ವೆಹಿಕಲ್ 2 ವೆಹಿಕಲ್ ಸಂವಹನ ವ್ಯವಸ್ಥೆ ಕಡ್ಡಾಯ. ದ್ವಿಚಕ್ರ, ತ್ರಿಚಕ್ರವಾಹನಗಳು, ಕಾರುಗಳು, ಎಸ್ಯುವಿಗಳು, ಬಸ್ಗಳು, ಗೂಡ್ಸ್ ವಾಹನಗಳು, ಟ್ರಕ್ಗಳು ಮತ್ತು ಹಗುರ ವಾಣಿಜ್ಯ ವಾಹಗಳು ಹೀಗೆ ಬಹುತೇಕ ವಾಹನಗಳು ಇವುಗಳಲ್ಲಿ ಸೇರಿವೆ.
ಈ ತಂತ್ರಜ್ಞಾನವನ್ನು ಹಂತ ಹಂತವಾಗಿ ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ಈ ವ್ಯವಸ್ಥೆಯ ಉತ್ಪಾದಕರು ಹಾಗೂ ಪೂರೈಕೆದಾರರಿಗೆ ಹಾರ್ಡ್ವೇರ್, ಸಾಫ್ಟ್ವೇರ್ ಸೌಲಭ್ಯ ಅಭಿವೃದ್ಧಿಪಡಿಸಲು ಸಾಕಷ್ಟು ಕಾಲಾವಕಾಶ ಸಿಗಲಿದೆ. ವಾಹನಗಳು ಪರಸ್ಪರ ಸಂವಹನ ನಡೆಸಲು ಅವಕಾಶ ನೀಡುವ ಈ ತಂತ್ರಜ್ಞಾನವು ರಸ್ತೆಗಳಲ್ಲಿ ವಾಹನ ಅಪಘಾತಗಳಾಗುವ ಸಂಭವಗಳನ್ನು ಗಣನೀಯವಾಗಿ ಇಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.
ಈ ವ್ಯವಸ್ಥೆಯು ವಾಹನಗಳ ವೇಗ, ಸ್ಥಳ, ದಿಕ್ಕು, ಲೇನ್ ಬದಲಾವಣೆ, ವೇಗ ಬದಲಾವಣೆ ಕುರಿತು ಪರಸ್ಪರ ಸಂವಹನಕ್ಕೆ ಅವಕಾಶ ನೀಡುತ್ತದೆ. ಚಾಲಕನ ಕಣ್ಣಿಗೆ ಕಾಣದ ಅಥವಾ ವಾಹನಗಳಿಗೆ ಅಳವಡಿಸಲಾಗಿರುವ ಸೆನ್ಸಾರ್ಗಳ ರೇಂಜ್ ಮೀರಿದ ಅಪಾಯಗಳ ಕುರಿತು ಎಚ್ಚರಿಸುತ್ತದೆ. ಮುಂದೆ ಸಾಗುತ್ತಿರುವ ವಾಹನ ದಿಢೀರ್ ಬ್ರೇಕ್ಹಾಕುವ ಸಾಧ್ಯತೆ, ಅಸುರಕ್ಷಿತ ಲೇನ್ ಬದಲಾವಣೆಗಳು, ಡಿಕ್ಕಿಯಾಗುವ ಸಾಧ್ಯತೆಗಳ ಕುರಿತು ತಕ್ಷಣ ಎಚ್ಚರಿಕೆ ನೀಡುತ್ತವೆ.
ಚೀನಾ, ಜಪಾನ್, ಅಮೆರಿಕ ಹಾಗೂ ಅನೇಕ ಯುರೋಪಿಯನ್ ರಾಷ್ಟ್ರಗಳು ಈಗಾಗಲೇ ವೆಹಿಕಲ್ ಟು ವೆಹಿಕಲ್ ಅಥವಾ ಬ್ರಾಡರ್ ವೆಹಿಕಲ್ಸ್ ಟು ಎವ್ರಿಥಿಂಗ್ ಸಿಸ್ಟಮ್ಸ್ ಅನ್ನು ಪ್ರಾಯೋಗಿಕವಾಗಿ ಮತ್ತು ಆಯ್ದ ಉತ್ಪಾದನೆ ಮೂಲಕ ಪರೀಕ್ಷಿಸಿವೆ.
ರಸ್ತೆ ಅಪಘಾತಗಳನ್ನು ತಪ್ಪಿಸುವ ಅಥವಾ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ವ್ಯವಸ್ಥೆ ಉತ್ತಮ ಎಂದರೂ ತಪ್ಪಾಗಲಾರದು.

