ಮಹಿಳೆಯರನ್ನು ಬಾಧಿಸುವ ಹಲವು ಖಾಯಿಲೆಗಳಲ್ಲಿ ಸ್ತನ ಕ್ಯಾನ್ಸರ್ ಸಹ ಒಂದು. ಕ್ಯಾನ್ಸರ್ ಒಂದು ಬಾರಿ ಅಟಕಾಯಿಸಿದರೆ ಮತ್ತೆ ಆ ನೋವನ್ನು ಅನುಭವಿಸಿಯೇ ತೀರಬೇಕು. ಆದರೆ ಸ್ತನ ಕ್ಯಾನ್ಸರ್ ಬಾರದಂತೆ ಅಪಾಯವನ್ನು ಕಡಿಮೆ ಮಾಡಲು ಕೆಲವು ಆಹಾರಗಳು ಸಹಾಯ ಮಾಡುತ್ತವೆ ಎನ್ನುವುದು ಸತ್ಯ.
ಅಧಿಕ ನಾರಿನಾಂಶ ಹೊಂದಿರುವ ಆಹಾರ ವಸ್ತುಗಳನ್ನು ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ನಾರಿನಂಶ ದೇಹದ ಜೀರ್ಣಕ್ರಿಯೆಯನ್ನು ಸುಗಮಗೊಳಿಸುವುದರ ಜೊತೆಗೆ ಹೆಚ್ಚುವರಿ ಈಸ್ಟ್ರೋಜನ್ ಹಾರ್ಮೋನ್ ಅನ್ನು ಹೊರಹಾಕುವ ಕೆಲಸ ಮಾಡುತ್ತದೆ. ಈಸ್ಟ್ರೋಜನ್ ಹಾರ್ಮೋನ್ ಹೆಚ್ಚಾದಷ್ಟು ಬ್ರೆಸ್ಟ್ ಕ್ಯಾನ್ಸರ್ ಅಪಾಯ ಹೆಚ್ಚು.
ನಾರಿನಂಶ ಸಮೃದ್ಧವಾದ ಸಂಪೂರ್ಣ ಧಾನ್ಯಗಳು, ಓಟ್ಸ್, ಹಣ್ಣುಗಳು, ತರಕಾರಿಗಳ ಸೇವನೆ ಬ್ರೆಸ್ಚ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಹಸಿರು ಸೊಪ್ಪುಗಳು, ಬೆರ್ರಿ ಹಣ್ಣುಗಳು, ಹೂಕೋಸು, ಬ್ರೊಕೊಲಿ, ಟೊಮೆಟೋ ಮೊದಲಾದ ತರಕಾರಿಗಳಲ್ಲಿ ಹೇರಳವಾಗಿ ದೇಹಕ್ಕೆ ಬೇಕಾದ ಖನಿಜಾಂಶಗಳು, ಪ್ರೊಟೋಕೆಮಿಕಲ್ಗಳು ಸಿಗುತ್ತವೆ. ಇವುಗಳು ಜೀವಕೋಶಗಳನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತವೆ.
ಸಾರ್ಡಿನ್ ಫಿಶ್, ಸಾಲ್ಮನ್ ಫಿಶ್, ಡ್ರೈ ಫ್ರೂಟ್ಸ್, ಬೀಜಗಳನ್ನು ಆಹಾರವಾಗಿ ಬಳಕೆ ಮಾಡುವುದು ದೇಹಕ್ಕೆ ಬೇಕಾದ ಒಮೆಗಾ 3 ಯನ್ನು ಒದಗಿಸುವಲ್ಲಿ ಸಹಾಯ ಮಾಡುತ್ತವೆ. ಇವು ಕ್ಯಾನ್ಸರ್ ಕೋಶಗಳು ಬೆಳವಣಿಗೆ ಕಾಣುವ ಅಪಾಯವನ್ನು ತಗ್ಗಿಸುತ್ತವೆ.
ಕಾಳುಗಳು, ಕಡಲೆ, ಮೀನುಗಳು, ಚರ್ಮ ತೆಗೆದ ಕೋಳಿಯಿಂದ ತಯಾರಿಸಿದ ಆಹಾರಗಳು ಸ್ಯಾಚುರೇಟೆಡ್ ಕೊಬ್ಬು ಇಲ್ಲದೆ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುವ ಕೆಲಸ ಮಾಡುತ್ತವೆ. ಪ್ರೊಟೀನ್ ಭರಿತ ಆಹಾರಗಳ ಸೇವನೆ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡಿಕೊಳ್ಳುವಲ್ಲಿ ಹೆಚ್ಚು ಉಪಯುಕ್ತ.
ಹಾಗೆಯೇ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚು ಮಾಡುವ ಕೆಲವು ವಸ್ತುಗಳ ಸೇವನೆಯನ್ನು ವರ್ಜಿಸಿದಲ್ಲಿ ಉತ್ತಮ. ಮದ್ಯಪಾನ ಸ್ತನ ಕ್ಯಾನ್ಸರ್ಗೆ ಮಾರಕ ಎಂದೇ ಹೇಳಬಹುದು. ಜೊತೆಗೆ ಸಕ್ಕರೆಯಿಂದ ತುಂಬಿದ ಪಾನೀಯಗಳು, ಸಂಸ್ಕರಿಸಿದ ಆಹಾರಗಳನ್ನು ತ್ಯಜಿಸಿದಲ್ಲಿ ಉತ್ತಮ. ಋತುಬಂಧದ ನಂತರದ ಹೆಚ್ಚಿನ ತೂಕ ಸಹ ಬ್ರೆಸ್ಟ್ ಕ್ಯಾನ್ಸರ್ ಅಪಾಯವನ್ನು ದುಪ್ಪಟ್ಟು ಏರಿಸುತ್ತದೆ.
ಕ್ಯಾನ್ಸರ್ ಎಂಬ ಮಹಾಮಾರಿ ಬಂದ ಮೇಲೆ ಅದರಿಂದ ದುಣಮುಖವಾಗುವುದು ಅತ್ಯಂತ ಕಷ್ಟವಾದ ಸಂಗತಿ. ಆದರೆ ನಾವು ಸೇವನೆ ಮಾಡುವ ಆಹಾರದಲ್ಲಿ ಕೆಲವು ಕ್ಯಾನ್ಸರ್ ಅಪಾಯ ಬಾಧಿಸದ ಹಾಗೆ ಸಹಾಯ ಮಾಡುತ್ತವೆ ಎನ್ನುವುದು ಸತ್ಯ.

