ಮುದುರಂಗಡಿ ಕೊಲೆ ಆರೋಪಿ ಪೊಲೀಸರ ಮೇಲೆ ಹಲ್ಲೆ; ಪರಾರಿಯಾಗಲು ಯತ್ನಿಸಿದಾಗ ಕಾಲಿಗೆ ಗುಂಡೇಟು!
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದುರಂಗಡಿ ಪೇಟೆಯಲ್ಲಿ ಹಾಡಹಗಲೇ ನಡೆದಿದ್ದ ಡೇವಿಡ್ ಡಿಸೋಜ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ರಾಜುನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಪು ಪಿಎಸ್ಐ ತೇಜಸ್ವಿ ಹಾಗೂ ಕಾರ್ಕಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ನೇತೃತ್ವದ ಪೊಲೀಸ್ ತಂಡ ಆರೋಪಿ ರಾಜುನನ್ನು ಬಂಧಿಸಿ ಕರೆತರುತ್ತಿದ್ದ ವೇಳೆ ಬೈಂದೂರು ಸಮೀಪದ ಒತ್ತಿನೆಣೆ ಬಳಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಆರೋಪಿ ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಕಾಪು ಪಿಎಸ್ಐ ತೇಜಸ್ವಿ ಅವರು ತಮ್ಮ ಸರ್ವೀಸ್ ಪಿಸ್ತೂಲ್ನಿಂದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ.
ಘಟನೆಯಲ್ಲಿ ಪಿಎಸ್ಐ ತೇಜಸ್ವಿ ಅವರಿಗೂ ಗಾಯಗಳಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪಿಎಸ್ಐ ತೇಜಸ್ವಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಮುದುರಂಗಡಿ ಡೇವಿಡ್ ಡಿಸೋಜ ಕೊಲೆ ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿ ರಾಜುವಿನ ವಿಚಾರಣೆ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗಳು ಹೊರಬರುವ ಸಾಧ್ಯತೆಯಿದೆ.

