ಕಿಡ್ನಿ ನಮ್ಮ ದೇಹದ ಬಹುಮುಖ್ಯ ಅಂಗ. ರಕ್ತ ಶುದ್ಧೀಕರಣ ಮಾಡಿ, ದೇಹದ ಹಾನಿಕಾರಕ ವಿಷಾಂಶಗಳನ್ನು, ಹೆಚ್ಚುವರಿ ನೀರನ್ನು ಹೊರಹಾಕುವ ಕೆಲಸವನ್ನು ಕಿಡ್ನಿ ಮಾಡುತ್ತದೆ.
ಕಿಡ್ನಿ ರಕ್ತವನ್ನು ಶೋಧಿಸಿ ಕಲುಷಿತ, ತ್ಯಾಜ್ಯಗಳನ್ನು ತೆಗೆದು ಹಾಕುತ್ತದೆ. ನಮ್ಮ ದೇಹದಲ್ಲಿರುವ ದ್ರವ ಮತ್ತು ಖನಿಜಗಳ ಸಮತೋಲನವನ್ನು ಕಾಪಾಡುವ ಕೆಲಸವನ್ನು ಮಾತ್ರಪಿಂಡಗಳು ಮಾಡುತ್ತವೆ. ಬ್ಲಡ್ ಶುಗರ್ ನಿಯಂತ್ರಣಕ್ಕೆ ಸಹಾಯವನ್ನು ಕಿಡ್ನಿ ಮಾಡುತ್ತದೆ. ಕಿಡ್ನಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಬೆಂಬಲ ನೀಡುತ್ತದೆ.
ದಿನನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೇ ಇದ್ದರೆ ಕಿಡ್ನಿ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬ್ಲಡ್ ಶುಗರ್, ಬ್ಲಡ್ ಪ್ರೆಶರ್ ಗಳನ್ನು ನಿಯಂತ್ರಣದಲ್ಲಿ ಇಡುವ ಮೂಲಕ ನಮ್ಮ ಕಿಡ್ನಿಯನ್ನು ಆರೋಗ್ಯಯುತವಾಗಿ ಇರಿಸಿಕೊಳ್ಳಬಹುದು. ಅತಿಯಾಗಿ ಪೈನ್ ಕಿಲ್ಲರ್ಗಳನ್ನು ವೈದ್ಯರ ಸಲಹೆ ಪಡೆಯದೆ ನಿರಂತರವಾಗಿ ಸೇವನೆ ಮಾಡುವುದು ಸಹ ಕಿಡ್ನಿ ಸಂಬಂಧಿತ ತೊಂದರೆಗೆ ಕಾರಣವಾಗುತ್ತದೆ. ಆರೋಗ್ಯಕರವಾದ ಆಹಾರ ಪದ್ದತಿ ಅಳವಡಿಸಿಕೊಳ್ಳುವುದರಿಂದಲೂ ಕಿಡ್ನಿಗೆ ಎದುರಾಗುವ ತೊಂದರೆಗಳನ್ನು ತಪ್ಪಿಸಬಹುದು.
ಕಿಡ್ನಿಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಹಾರಗಳು ಸಹ ಮುಖ್ಯ ಪಾತ್ರ ವಹಿಸುತ್ತವೆ.
ಬೆಳ್ಳುಳ್ಳಿ ಸೇವನೆ ಕಿಡ್ನಿಯ ಆರೋಗ್ಯಕ್ಕೆ ಉತ್ತಮ. ಇದರಲ್ಲಿನ ಅಲಿಸಿನ್ ಎಂಬ ಪ್ರಮುಖ ಸಂಯುಕ್ತದ ಜೊತೆಗೆ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಕಡಿಮೆ ಮಾಡುವ ಗುಣಗಳಿವೆ. ಬೆಳ್ಳುಳ್ಳಿಯಲ್ಲಿ ಸೋಡಿಯಂ, ಪೊಟ್ಯಾಸಿಯಂ ಮತ್ತು ಫಾಸ್ಫರಸ್ ಪ್ರಮಾಣವೂ ಕಡಿಮೆಯಾಗಿರುವುದರಿಂದ ಕಿಡ್ನಿಯ ಆರೋಗ್ಯಕ್ಕೆ ಪೂರಕ.
ಸೇಬು ಹಣ್ಣನ್ನು ಸೇವನೆ ಮಾಡುವುದು ಕಿಡ್ನಿ ಸಮಸ್ಯೆಗಳನ್ನು ತಪ್ಪಿಸುವುದಕ್ಕೆ ಸಹಾಯ ಮಾಡುತ್ತವೆ. ಸೇಬಿನಲ್ಲಿ ಪೆಕ್ಟಿನ್ ಎಂಬ ಕರಗುವ ನಾರಿನಂಶವಿದೆ. ಇದು ದೇಹದ ಜೀರ್ಣಕ್ರಿಯೆಗೆ ನೆರವಾಗುವುದರ ಜೊತೆಗೆ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಉಪಕಾರಿ. ಕಿಡ್ನಿಯ ಮೇಲೆ ಬೀಳುವ ಒತ್ತಡ ಕಮ್ಮಿ ಮಾಡುವುದಕ್ಕೆ ನಿರಂತರ ಸೇಬು ಸೇವನೆ ಅತ್ಯುತ್ತಮ ಮಾರ್ಗ. ಕಿಡ್ನಿ ಕಲ್ಲುಗಳು ಹಾಗೂ ಮೂತ್ರನಾಳದ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹ ಸೇಬು ಸಹಾಯಕ.
ಕಲ್ಲಂಗಡಿಯಲ್ಲಿ ನೀರಿನಂಶ ಹೇರಳವಾಗಿದೆ. ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಇದರಿಂದ ಮೂತ್ರ ವಿಸರ್ಜನೆ ಹೆಚ್ಚುತ್ತದೆ. ಕಿಡ್ನಿಯಲ್ಲಿ ಶೇಖರಣೆಯಾಗುವ ಕಲ್ಮಷಗಳನ್ನು ಕಡಿಮೆ ಮಾಡಲು ಇದು ಸಹಕಾರಿ.

