ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ನೀಡುವ ಆಹಾರದಲ್ಲಿ ಬದಲಾವಣೆ ತರಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.
ರೋಗಿಗಳ ಖಾಯಿಲೆ, ವಯಸ್ಸು, ಚಿಕಿತ್ಸೆಗೆ ಅನುಗುಣವಾಗಿ ಪೌಷ್ಟಿಕ ಆಹಾರ ವಿತರಣೆಗೆ ಇಲಾಖೆ ಮುಂದಾಗಿದೆ. ಸಾಮಾನ್ಯ ರೋಗಿಗಳು, ಚಿಕಿತ್ಸಾ ಆಹಾರದ ಅಗತ್ಯವಿರುವ ರೋಗಿಗಳು, ಗರ್ಭಿಣಿ ಹಾಗೂ ಬಾಣಂತಿಯರು ಮತ್ತು ಮಕ್ಕಳಿಗೆ ಸೇರಿ ಒಟ್ಟು ನಾಲ್ಕು ಮಾದರಿಯ ಆಹಾರ ನೀಡಲು ಇಲಾಖೆ ಚಿಂತನೆ ನಡೆಸಿದೆ. ಈ ಕುರಿತು ಹೊಸ ಆಹಾರ ಮೆನು ಸಿದ್ಧವಾಗಿದ್ದು, ಅಧಿಕೃತ ಅನುಮೋದನೆ ಬಳಿಕ ರಾಜ್ಯಾದ್ಯಂತ ಜಾರಿಗೆ ತರಲು ಉದ್ದೇಶಿಸಲಾಗಿದೆ.
ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ರೋಗಿಯ ಖಾಯಿಲೆ, ಚಿಕಿತ್ಸೆ ಹಾಗೂ ವಯಸ್ಸಿಗೆ ಅನುಗುಣವಾಗಿ ಆಹಾರ ನೀಡುವ ಬಗ್ಗೆ ಚಿಂತನೆ ನಡೆದಿದೆ. ಇದರ ಜೊತೆಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಆಹಾರ ಪದ್ಧತಿಗೆ ಅನುಗುಣವಾಗಿ ಮೆನು ರೂಪಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಈ ವರ್ಷದೊಳಗಾಗಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ರೂಪಿಸಲಾದ ಹೊಸ ಮೆನು ಜಾರಿಗೆ ಬರುವ ಸಾಧ್ಯತೆ ಇದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

