ಬೀಟ್ರೋಟ್ ಅಪಾರ ಪೋಷಣೆಯುಕ್ತ ವಸ್ತುಗಳನ್ನು ತನ್ನೊಳಗೆ ಅಡಕವಾಗಿರಿಸಿಕೊಂಡಿರುವ ಒಂದು ಅಮೂಲ್ಯ ಆಹಾರ ವಸ್ತು ಎನ್ನಬಹುದು.
ಕೆಂಪು ಬಣ್ಣದಿಂದ ಮಾತ್ರವಲ್ಲದೆ ಆರೋಗ್ಯಕ್ಕೆ ಪೂರಕವಾದ ಅಂಶಗಳಿಂದಲೂ ಬೀಟ್ರೋಟ್ ಒಂದು ಅದ್ಭುತ ತರಕಾರಿ. ಪ್ರತಿನಿತ್ಯದ ಆಹಾರದಲ್ಲಿ ಬೀಟ್ರೋಟ್ಗೆ ಸ್ಥಾನ ನೀಡಿದಲ್ಲಿ ಹಲವಾರು ಪ್ರಯೋಜನಗಳಿವೆ ಎನ್ನುವುದು ನಿಮಗೆ ಗೊತ್ತಾ?
ಬೀಟ್ರೋಟ್ ರಕ್ತದೊತ್ತಡ ನಿಯಂತ್ರಿಸಿ, ಹೃದಯದ ಆರೋಗ್ಯ ಕಾಪಾಡುವ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಬೀಟ್ರೂಟ್ನಲ್ಲಿ ನೈಸರ್ಗಿಕವಾಗಿ ಅಜೈವಿಕ ನೈಟ್ರೇಟ್ಗಳು ಹೇರಳವಾಗಿವೆ. ನಾವು ಬೀಟ್ರೂಟ್ ಸೇವಿಸಿದಾಗ, ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಮತ್ತು ದೇಹದ ಕಿಣ್ವಗಳು ಈ ನೈಟ್ರೇಟ್ ಅನ್ನು ನೈಟ್ರಿಕ್ ಆಕ್ಸೈಡ್ ಆಗಿ ಬದಲಾಯಿಸುತ್ತವೆ. ನೈಟ್ರಿಕ್ ಆಕ್ಸೈಡ್ ರಕ್ತನಾಳಗಳ ಗೋಡೆಗಳನ್ನು ಸಡಿಲಗೊಳಿಸಿ, ಅವುಗಳನ್ನು ಅಗಲಗೊಳಿಸುತ್ತದೆ. ಇದರಿಂದ ರಕ್ತ ಸಂಚಾರ ಸುಗಮವಾಗಿ, ಕೆಲವೇ ಗಂಟೆಗಳಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ನಿಯಮಿತ ಸೇವನೆಯಿಂದ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯ ಶೇ. 10 ರಿಂದ 15 ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಪುರಾತನ ಕಾಲದಿಂದಲೂ ನೈಸರ್ಗಿಕ ವಯಾಗ್ರ ಎಂದೇ ಬೀಟ್ರೋಟ್ ಅನ್ನು ಕರೆಯಲಾಗುತ್ತದೆ. ಪುರುಷರಲ್ಲಿ ನೈಟ್ರಿಕ್ ಆಕ್ಸೈಡ್ ಜನನಾಂಗದ ಭಾಗಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ನಿರಂಜನ/ಲೈಂಗಿಕ ಶಕ್ತಿಯನ್ನು ಉತ್ತೇಜಿಸಲು ಅಗತ್ಯವಾದ ರಕ್ತದ ಒತ್ತಡವನ್ನು ನೀಡುತ್ತದೆ.
ಬೀಟ್ರೂಟ್ ಗುಣದಲ್ಲಿ ಸಿಹಿಯಾದರೂ, ಇದರ ಗ್ಲೈಸೆಮಿಕ್ ಇಂಡೆಕ್ಸ್ (GI) ಮಧ್ಯಮ ಮಟ್ಟದಲ್ಲಿದೆ (51) ಮತ್ತು ಗ್ಲೈಸೆಮಿಕ್ ಲೋಡ್ (GL) ಕೇವಲ 5 ಇರುತ್ತದೆ. ಇದರಲ್ಲಿ ‘ಆಲ್ಫಾ-ಲಿಪೋಯಿಕ್ ಆಸಿಡ್’ ಎಂಬ ಪ್ರಬಲ ಆಂಟಿಆಕ್ಸಿಡೆಂಟ್ ಇದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುವುದಲ್ಲದೆ, ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ. ಮಧುಮೇಹಿಗಳಲ್ಲಿ ಕಾಡುವ ನರಗಳ ದೌರ್ಬಲ್ಯ ಅಥವಾ ನೋವನ್ನು ಶಮನಗೊಳಿಸಲು ಬೀಟ್ರೋಟ್ ಸಹಕಾರಿ.
ಬೀಟ್ರೂಟ್ನಲ್ಲಿ ಐರನ್ ಜೊತೆಗೆ ವಿಟಮಿನ್ B9 ಉತ್ತಮ ಪ್ರಮಾಣದಲ್ಲಿದೆ. ಫೋಲೇಟ್ ಹೊಸ ಕೆಂಪು ರಕ್ತಕಣಗಳ ನಿರ್ಮಾಣಕ್ಕೆ ಅತ್ಯಗತ್ಯ. ಲಿವರ್ ಡಿಟಾಕ್ಸ್ ಬೀಟ್ರೂಟ್ಗೆ ಕೆಂಪು ಬಣ್ಣ ನೀಡುವ ಬೆಟಾಲೈನ್ಸ್ ಎಂಬ ವರ್ಣದ್ರವ್ಯವು ಯಕೃತ್ತಿನಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಮತ್ತು ಪಿತ್ತಜನಕಾಂಗದಲ್ಲಿ ಕೊಬ್ಬು ಶೇಖರಣೆಯಾಗದಂತೆ ತಡೆಯಲು ನೆರವಾಗುತ್ತದೆ.
ವ್ಯಾಯಾಮ ಅಥವಾ ಜಿಮ್ಗೆ ಹೋಗುವ 2-3 ಗಂಟೆಗಳ ಮೊದಲು ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಸ್ನಾಯುಗಳಿಗೆ ಆಮ್ಲಜನಕದ ಪೂರೈಕೆ ಹೆಚ್ಚಾಗುತ್ತದೆ. ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ.

