ಉಡುಪಿಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರ್ಕಾರಿ ಅಕ್ಕಿ ಅಕ್ರಮ ದಾಸ್ತಾನು ಆರೋಪದ ನೆಪವೊಡ್ಡಿ ಗುಜರಿ ವ್ಯಾಪಾರಿಯೊಬ್ಬರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ನಾಗೇಂದ್ರ ಪುತ್ರನ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಗೇಂದ್ರ ಪುತ್ರನ್, ಸಚಿನ್ ಹಾಗೂ ಪ್ರದೀಪ್ (ಅಲಿಯಾಸ್ ಎಸ್ಟಿಡಿ ಪ್ರದೀಪ್) ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆಗಸ್ಟ್ 31ರಂದು ಬೆಳಿಗ್ಗೆ 11:30ರ ಸುಮಾರಿಗೆ ಆರೋಪಿ ಸಚಿನ್ ಗುಜರಿ ವ್ಯಾಪಾರಿಗೆ ಕರೆ ಮಾಡಿ ಮನೆಯ ಅಂಗಳದಲ್ಲಿ ಎರಡು ಚೀಲ ಅಕ್ಕಿ ಇರುವುದಾಗಿ ತಿಳಿಸಿದ್ದ. ವ್ಯಾಪಾರಿ ಸ್ಥಳಕ್ಕೆ ತಲುಪಿದಾಗ ಸಚಿನ್ ಆಟೋರಿಕ್ಷಾದಲ್ಲಿ ಹಾಗೂ ನಾಗೇಂದ್ರ ಪುತ್ರನ್ ಮತ್ತು ಪ್ರದೀಪ್ ಬೈಕ್ನಲ್ಲಿ ಆಗಮಿಸಿದ್ದಾರೆ. ಈ ವೇಳೆ ನಾಗೇಂದ್ರ ಪುತ್ರನ್ ತಾನು ಸಾಮಾಜಿಕ ಕಾರ್ಯಕರ್ತ ಎಂದು ಪರಿಚಯಿಸಿಕೊಂಡು, ಮನೆಯ ಅಂಗಳದಲ್ಲಿದ್ದ ಅಕ್ಕಿ ಚೀಲಗಳನ್ನು ವೀಡಿಯೋ ಮಾಡಿಕೊಂಡು ಸರ್ಕಾರಿ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿರುವ ಬಗ್ಗೆ ದೂರು ನೀಡಿ ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದಾನೆ.
ಪ್ರಕರಣದಿಂದ ಪಾರಾಗಲು ಆರೋಪಿಗಳು ಆರಂಭದಲ್ಲಿ ₹2 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ವ್ಯಾಪಾರಿ ಹಣ ನೀಡಲು ಸಾಧ್ಯವಿಲ್ಲ ಎಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕನಿಷ್ಠ ₹1 ಲಕ್ಷ ನೀಡಲೇಬೇಕು, ಇಲ್ಲವಾದರೆ ಆಳುಗಳನ್ನು ಕರೆಸಿ ಹೊಡೆದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಮಧ್ಯಾಹ್ನ 2:45ರವರೆಗೂ ಸ್ಥಳದಲ್ಲೇ ಇದ್ದು ಹಣಕ್ಕಾಗಿ ಪಟ್ಟು ಹಿಡಿದಿದ್ದ ಆರೋಪಿಗಳು, ದೂರುದಾರರ ಮಕ್ಕಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಮತ್ತೆ ನಿಂದಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಸಂಬಂಧ ದೂರುದಾರರು ನೀಡಿದ ಸುಳಿವಿನ ಆಧಾರದ ಮೇಲೆ ಕೋಟ ಪೊಲೀಸರು ಬೆದರಿಕೆ ಮತ್ತು ಹಣಕ್ಕೆ ಬೇಡಿಕೆ ಇಟ್ಟ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

