ಉಡುಪಿ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರ ಸವಿ ನೆನಪಿಗಾಗಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಸಾರ್ವಜನಿಕರಿಗೆ ಉಚಿತ ಚಕ್ಕುಲಿ ವಿತರಿಸಲಾಯಿತು.
ನಾಗರಿಕ ಸಮಿತಿ ಕಚೇರಿ ಮುಂಭಾಗದಲ್ಲಿ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಮಾತನಾಡಿ, ಹಲವು ವರ್ಷಗಳಿಂದ ಈ ಸೇವಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು.
ಶಂಕರ್ ನಾಯಕ್ ಅವರ ತಂಡ ಸ್ಥಳದಲ್ಲೇ ಚಕ್ಕುಲಿ ತಯಾರಿಸಿ ವಿತರಿಸಿದ್ದು, ಸುಮಾರು 10 ಸಾವಿರ ಚಕ್ಕುಲಿಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

