ಪುತ್ತೂರು: ಗ್ರಾಮೀಣ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡುಕೋಣಗಳು ಇದೀಗ ಪುತ್ತೂರು ಪೇಟೆಯತ್ತಲೂ ಆಗಮಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸೆ.11ರ ನಸುಕಿನ ಜಾವ ಬೈಪಾಸ್ ರಸ್ತೆಯ ದುಗ್ಗಮ್ಮ–ದೇರಣ್ಣ ಹಾಲ್ ಸಮೀಪ ಎರಡು ಕಾಡುಕೋಣಗಳು ರಸ್ತೆಯಲ್ಲಿ ಕಾಣಿಸಿಕೊಂಡಿವೆ.
ರಸ್ತೆಯಲ್ಲಿ ಕಾಡುಕೋಣಗಳನ್ನು ಕಂಡು ಸಾರ್ವಜನಿಕರು ಹಾಗೂ ವಾಹನ ಸವಾರರು ಕೆಲಕಾಲ ಆತಂಕಗೊಂಡರು. ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಕಾಡುಕೋಣಗಳು ಜನವಸತಿ ಪ್ರದೇಶಗಳತ್ತ ಬರುತ್ತಿರುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

