ಉಡುಪಿ: ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ಡಿವೈಎಸ್ಪಿ ಹಾಲಮೂರ್ತಿ ರಾವ್ ಹಾಗೂ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಕಟ್ಟಡ ಪರವಾನಿಗೆ ಅರ್ಜಿಗಳ ವಿಲೇವಾರಿ, ಪಂಚಾಯಿತಿ ಆಡಳಿತ ಹಾಗೂ ಸಾರ್ವಜನಿಕ ಸೇವೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿತು.
ಚುನಾವಣಾ ಸಂದರ್ಭ ಮನೆ ನಿವೇಶನ ನೀಡುವುದಾಗಿ ಭರವಸೆ ನೀಡಿ ಸುಮಾರು 400 ಅರ್ಜಿಗಳನ್ನು ಪಡೆದಿರುವ ಆರೋಪದ ಬಗ್ಗೆಯೂ ಮಾಹಿತಿ ಕಲೆಹಾಕಲಾಯಿತು. ಬಳಿಕ ಪಂಚಾಯಿತಿ ವ್ಯಾಪ್ತಿಯ ಕಲ್ಲುಕೋರೆಗಳಿಗೆ ಭೇಟಿ ನೀಡಿ ಅನುಮತಿ ಹಾಗೂ ದಾಖಲೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಲಾಯಿತು.

