ಉಡುಪಿಯ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ನಿಲ್ಲಿಸಲಾಗಿದ್ದ ಶ್ರೀದುರ್ಗಾಂಬ ಸಂಸ್ಥೆಯ ಖಾಸಗಿ ಬಸ್ಸೊಂದನ್ನು ಅಪರಿಚಿತ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟ್ಬೆಲ್ತೂರು ಕುಂದಾಪುರದ ನಿವಾಸಿ, ಬಸ್ ನಿರ್ವಾಹಕರಾದ ಕೃಷ್ಣ ಅವರು ನೀಡಿದ ದೂರಿನ ಪ್ರಕಾರ, ದಿನಾಂಕ 28/09/2026 ರಂದು ರಾತ್ರಿ 9:48 ಗಂಟೆಯ ಸುಮಾರಿಗೆ ಚಾಲಕ ರಾಯಿನ್ ಉಚ್ಚಿಲ ಅವರೊಂದಿಗೆ KA-20-AD-1931 ನೋಂದಣಿ ಸಂಖ್ಯೆಯ ಶ್ರೀದುರ್ಗಾಂಬ ಬಸ್ಸನ್ನು ಹನುಮಾನ್ ಪೆಟ್ರೋಲ್ ಬಂಕ್ ಹಿಂದುಗಡೆ ನಿಲ್ಲಿಸಿದ್ದರು. ಬಳಿಕ ರಾತ್ರಿ 10:00 ಗಂಟೆಗೆ ಇಬ್ಬರೂ ಸ್ಕೂಟರ್ನಲ್ಲಿ ಮನೆಗೆ ತೆರಳಿದ್ದರು.
ಮಾರನೇ ದಿನ ಅಂದರೆ ದಿನಾಂಕ 29/09/2026 ರಂದು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆಂದು ಪೆಟ್ರೋಲ್ ಬಂಕ್ಗೆ ಬಂದಾಗ ನಿಲ್ಲಿಸಿದ್ದ ಬಸ್ ನಾಪತ್ತೆಯಾಗಿತ್ತು. ಪರಿಶೀಲಿಸಿದಾಗ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ಇಬ್ಬರು ವ್ಯಕ್ತಿಗಳು ಬಸ್ಸನ್ನು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 132/2026, ಕಲಂ: 303(2) BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

