ಉಡುಪಿ : ಬೈಂದೂರಿನ ಯಡ್ತರೆ ಗ್ರಾಮದ ಜೀವನ (33) ಎಂಬಾಕೆ 2018ರಲ್ಲಿ ಯೋಗೇಂದ್ರ ಕುಮಾರ್ ಎಂಬವರ ಜೊತೆ ವಿವಾಹವಾಗಿದ್ದು, ದಂಪತಿಗೆ ಹೆಣ್ಣು ಮಗು ಜನಿಸಿದ್ದಕ್ಕೆ ಅತ್ತಿಗೆ, ಅತ್ತೆ ವರದಕ್ಷಿಣೆ ಕಿರುಕುಳ ನೀಡಿರುವ ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.
ಏನಿದು ಪ್ರಕರಣ :
ಜೀವನ, ಯೋಗೇಂದ್ರ ಕುಮಾರ್ ದಂಪತಿಗೆ 2021ರಲ್ಲಿ ಹೆಣ್ಣು ಮಗು ಜನಿಸಿತ್ತು. ಬಳಿಕ ಅತ್ತಿಗೆಗೆ ಗಂಡು ಮಗುವಾಗಿತ್ತು. ಇದರ ಪರಿಣಾಮ ಅತ್ತೆ, ಅತ್ತಿಗೆ ಜೀವನಳಿಗೆ ಕಿರುಕುಳ ನೀಡಲು ಆರಂಭಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಜೀವನ ವರದಕ್ಷಿಣೆ ಹಾಗೂ ಚಿನ್ನಾಭರಣ ತರಲಿಲ್ಲ ಎಂದು ಅತ್ತಿಗೆ ಹಂಗಿಸಿ ಮಾತನಾಡಿ, ಮನೆಯಿಂದ ಹೊರ ಹೋಗುವಂತೆ ಕಿರುಕುಳ ನೀಡುತ್ತಿದ್ದರು. ಜೀವನಳ ಮಾವ ಗಂಡನಿಗೆ ಕರೆ ಮಾಡದಂತೆ ತಾಕೀತು ಮಾಡಿದ್ದರು. ಪೂಜಾಳ ಗಂಡ ಕೂಡಾ ತನ್ನ ಹೆಂಡತಿ ನೀಡುತ್ತಿದ್ದ ಕಿರುಕುಳಕ್ಕೆ ಕುಮ್ಮಕ್ಕು ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿತರು ಎಲ್ಲಾ ಸೇರಿ ಜೀವನಳಿಗೆ ಅಡುಗೆ ಮಾಡಲು ಮನೆ ಒಳಗೆ ಹೋಗಲು ಬಿಡದೆ, ಹಿಯಾಳಿಸಿ ಮನೆಯಿಂದ ವರದಕ್ಷಿಣೆ ಹಣ ಮತ್ತು ಚಿನ್ನಾಭರಣ ತರುವಂತೆ ಕಿರುಕುಳ ನೀಡಿರುವುದಾಗಿ ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

