ಪುತ್ತೂರು : ಎಸ್ಬಿಐ ಬ್ಯಾಂಕ್ನಿಂದ ಕೋಟ್ಯಾಂತರ ರೂಪಾಯಿ ಸಾಲ ಪಡೆದು ಮರುಪಾವತಿಸದೆ, ವಸೂಲಿಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ ಪ್ರಕರಣ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಬೊಳುವಾರ ಎಂಬಲ್ಲಿ ಇರುವ ತಿರುಮಲ ಹೊಂಡಾ ಮಾಲೀಕ ಹಾಗೂ ಅವರ ಪುತ್ರನ ಮೇಲೆ ಪ್ರಕರಣ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ತಿರುಮಲ ಹೊಂಡಾ ಶೋರೂಮ್ ಮಾಲೀಕರಾದ ಕೃಷ್ಣ ಕಿಶೋರ್ ಎನ್.ಟಿ. ಹಾಗೂ ಅವರ ಪುತ್ರ ಅಖೀಲೇಶ್ ಎನ್.ಟಿ ಅವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸರು ಆರ್ಮ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎಸ್ಬಿಐ ಬ್ಯಾಂಕ್ನಿಂದ ಎರಡು ಕೋಟಿ ಸಾಲ ಪಡೆದುಕೊಂಡಿದ್ದು, ಅದು ಎನ್ಪಿಎ ಆಗಿ ನೋಟೀಸು ಕೂಡಾ ಜಾರಿ ಮಾಡಲಾಗಿತ್ತು. ಆದ್ರೆ ಸಾಲಪಡೆದವರು ಯಾವುದಕ್ಕೂ ಉತ್ತರಿಸದ ಹಿನ್ನಲೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಸೂಚನೆಯಂತೆ ಸಿಬ್ಬಂದಿ ಕೃಷ್ಣ ಕಿಶೋರ್ ಎನ್.ಟಿ ಅವರ ಮನೆಗೆ ಬೇಟಿ ನೀಡಿದ್ದರು.
ಈ ವೇಳೆ ಮನೆಯಲ್ಲಿದ್ದ ಮಗ ಅಖಿಲೇಶ್, ಸಿಬ್ಬಂದಿಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ತಂದೆ ಕೃಷ್ಣ ಕಿಶೋರ್ ಮನೆಗೆ ಬಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಪಿಸ್ತೂಲ್ ತೋರಿಸಿ ಶೂಟ್ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಸಿಬ್ಬಂದಿ ದೂರು ನೀಡಿದ್ದಾರೆ.

