ಬೆಂಗಳೂರು : ಪ್ರಸ್ತುತ ರಾಜಕೀಯ ವಿಷಯಗಳ ಚರ್ಚೆಗೆ ದಸರಾ ಉತ್ಸವ ವೇದಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಲವು ಶಾಸಕರು ಬಳಸಿಕೊಳ್ಳುತ್ತಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ ಮತ್ತು ಇದು ರಾಜಕೀಯ ಚರ್ಚೆಗೆ ವೇದಿಕೆಯಲ್ಲ ಎಂದು ಹೇಳಿದ್ದಾರೆ. ದಸರಾ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿ ರಾಜ್ಯದ ಜನತೆಗೆ ಸಿಎಂ ಅಪಮಾನ ಮಾಡಿದ್ದಾರೆ ಎಂದರು.
ಮೈಸೂರಿನ ಗತವೈಭವ ಮತ್ತು ಚಾಮುಂಡೇಶ್ವರಿ ದೇವಿಯ ಆಶೀರ್ವಾದದೊಂದಿಗೆ ರಾಜರ ಆಳ್ವಿಕೆಯಲ್ಲಿ ಈ ಪ್ರದೇಶವನ್ನು ಬಲಪಡಿಸಲು ಆಗ ಮಾಡಿದ ಪ್ರಯತ್ನಗಳ ಬಗ್ಗೆ ಚರ್ಚೆ ನಡೆಯಬಹುದಿತ್ತು. ಬದಲಾಗಿ, ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಅದು ರಾಜಕೀಯ ಚರ್ಚೆಗೆ ವೇದಿಕೆಯೇ? ಇದು ಅವರ ಪಾಲಿಗೆ ನಾಚಿಕೆಗೇಡಿನ ಸಂಗತಿ ಎಂದು ನಾರಾಯಣಸ್ವಾಮಿ ಹೇಳಿದರು.
ವೇದಿಕೆಯಲ್ಲಿ ರಾಜಕೀಯ ಚರ್ಚೆ ಮಾಡುವ ಬದಲು ಕನ್ನಡಕ್ಕಾಗಿ ಹೋರಾಡಿದವರನ್ನು ಮುಂದಿನ ವರ್ಷದಿಂದ ದಸರಾ ಉತ್ಸವಕ್ಕೆ ಕರೆಸಬೇಕು ಎಂದು ಪ್ರತಿಪಕ್ಷ ನಾಯಕ ಹೇಳಿದರು.
ಕಾಂಗ್ರೆಸ್ ನ ಪ್ರಮುಖರಾದ ಪರಮೇಶ್ವರ್, ಕೃಷ್ಣಬೈರೇಗೌಡ, ಸತೀಶ್ ಜಾರಕಿಹೊಳಿ, ಎಚ್.ಕೆ. ಪಾಟೀಲ ಅವರು ಪತ್ರಿಕಾಗೋಷ್ಠಿ ಮಾಡಿದ್ದರು. ಅವರು ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ ಎಂದು ಆರೋಪಿಸಿದರು.
ಆರ್. ಅಶೋಕ್ ಅವರು ವಿಪಕ್ಷ ನಾಯಕರಾಗಿದ್ದು, ಹಿಂದೆ ಆದ ಘಟನೆಯನ್ನು ತೆಗೆದು ಅವರು ರಾಜೀನಾಮೆ ಕೊಡಲಿ ಎಂದು ಹೇಳಿದರು.
ಸತ್ತು ಹೋದ ಕಥೆಯನ್ನು ತೆಗೆದು ಏನು ರಾಜೀನಾಮೆ ಕೇಳುತ್ತೀರಿ? ಮುಡಾ ಕೇಸಿಗೂ ಈ ಮುಗಿದು ಹೋದ ಕಥೆಗೂ ನೀವು ತಾಳೆ ಹಾಕುತ್ತಿದ್ದೀರಿ ಎಂದು ಟೀಕಿಸಿದರು.
ಇಷ್ಟು ದೊಡ್ಡ ನಾಯಕರಾಗಿ ನಿಮಗೆ ಇದರ ಅರಿವಾಗಲಿಲ್ಲವೇ ಎಂದರು. ಇದು ಸರಿಯಾದ ರೀತಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದ ಅವರು, ಮುಡಾ ಕೇಸಿನಲ್ಲಿ ತನಿಖೆಗೆ ಎರಡು ಕೋರ್ಟ್ಗಳ ಆದೇಶ ಆಗಿದೆ. ಇ.ಡಿ. ಈಗಾಗಲೇ ಅದರಲ್ಲಿ ಎಂಟ್ರಿ ಆಗಿದೆ. ನೀವು ಸೈಟ್ಗಳನ್ನು ವಾಪಸ್ ಕೊಟ್ಟರೂ ಒಂದೇ; ಕೊಡದಿದ್ದರೂ ಒಂದೇ ಮುಡಾದವರು ಈ ಸೈಟ್ಗಳನ್ನು
ವಾಪಸ್ ಪಡೆಯಬಾರದಿತ್ತು. ಕೋರ್ಟಿನಲ್ಲಿರುವಾಗ ಮುಡಾ ಮಾಡಿರುವುದು ಕೂಡ ತಪ್ಪೇ ಆಗಿದೆ ಎಂದರು.
ಆರ್.ಅಶೋಕ್ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ. ಮುಡಾ ವಿಚಾರದಲ್ಲಿ ತನಿಖೆ ಆಗಲಿದೆ. ಮುಖ್ಯಮಂತ್ರಿಗಳು ಇದರಲ್ಲಿ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ವಿಶ್ಲೇಷಿಸಿದರು. ಎಚ್ಡಿಕೆ ವಿರುದ್ಧ ಕೇಸಿನ ಕುರಿತು ಮಾತನಾಡಿದ ಅವರು, ಇದು ಕಾಂಗ್ರೆಸ್ ಸಂಸ್ಕೃತಿ. ಖೆಡ್ಡಾ ತೋಡಿ ಕೆಲವರನ್ನು ಹಳ್ಳಕ್ಕೆ ಬೀಳಿಸುವ ಕೆಲಸ ಪ್ರಾರಂಭ ಮಾಡಿದ್ದಾರೆ ಎಂದರು.
ಬಿಜೆಪಿ- ಜೆಡಿಎಸ್ ಅಂದರೆ ಎನ್ಡಿಎ ಮಿತ್ರಕೂಟದ ಮೇಲೆ ಆರೋಪ ಹೊರಿಸಲು ಕಾಂಗ್ರೆಸ್ಸಿನಲ್ಲಿ ಒಂದು ಪಡೆಯೇ ಸಿದ್ಧವಾಗಿದೆ. ಎರಡೂ ಪಕ್ಷದ ಮುಖಂಡರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.
ದಿನೇಶ್ ಗುಂಡೂರಾವ್ ಅವರು ಸಾವರ್ಕರ್ ಅವರು ಬೀಫ್ ತಿನ್ನುತ್ತಿದ್ದರು ಎಂದಿದ್ದಾರೆ. ದಿನೇಶ್ ಗುಂಡೂರಾಯರೇ ನೀವು ಬೀಫ್ ತಿನ್ನುತ್ತೀರೆಂದು ಹೀಗೆ ಹೇಳಿದ್ದು ಸರಿಯೇ? ಅವರು ದೇಶ ಮೆಚ್ಚಿದ ಶಕ್ತಿ. ಅಂಥ ವ್ಯಕ್ತಿತ್ವದ ಬಗ್ಗೆ ಮಾತನಾಡಲು ನಿಮಗೆ
ಯಾವ ಯೋಗ್ಯತೆ ಇದೆ ಎಂದು ಪ್ರಶ್ನಿಸಿದರು.
ನೀವು ನಿಮ್ಮ ಇತಿಮಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು
ತಿಳಿಸಿದರು. ಅವರು ಮಾಂಸಾಹಾರಿ, ಬೀಫ್ ತಿನ್ನುತ್ತಿದ್ದರೆಂದು ಯಾವ ಚರಿತ್ರೆಯಲ್ಲಿ ನೀವು ಓದಿದ್ದೀರಿ? ನಿಮ್ಮ ಬಗ್ಗೆ ಎಲ್ಲರಿಗೂ ಗೊತ್ತಿದೆ. ನೀವೇನು? ನಿಮ್ಮ ಚರಿತ್ರೆ ಏನು? ಎಂದು ಎಲ್ಲರಿಗೂ ಗೊತ್ತಿದೆ. ನೀವು ಶಿವಾಜಿನಗರದಲ್ಲಿ ಎಲ್ಲೆಲ್ಲಿ ಏನೇನು ತಿನ್ನುತ್ತೀರೆಂದು ಇಡೀ ಶಿವಾಜಿನಗರ ಹೇಳುತ್ತದೆ. ಬೀಫ್ ಎಲ್ಲಿ,
ಮತ್ತೊಂದು ಎಲ್ಲಿ ತಿನ್ನುತ್ತೀರೆಂದು ಎಲ್ಲ ಗೊತ್ತಿದೆ ಎಂದರು.
ಉಪ ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ದಲಿತರಿಗೆ ದೇವಾಲಯ ಪ್ರವೇಶವನ್ನು ತಡೆಯಲಾಗಿದೆ. ಕಾಂಗ್ರೆಸ್ಸಿಗರು ದಲಿತರ ಕುರಿತು ಮೊಸಳೆಕಣ್ಣೀರು ಸುರಿಸುತ್ತಾರೆ. ಡಿಸಿಎಂಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಅವರೇ ನಿಂತು ದಲಿತರನ್ನು ದೇಗುಲ ಪ್ರವೇಶ ಮಾಡಿಸಬೇಕು; ಶಾಂತಿ ಸಭೆ ಮಾಡಿಸಿ ಬಾಬಾ ಸಾಹೇಬರ ಸಂವಿಧಾನದಂತೆ ನ್ಯಾಯ ಕೊಡಿಸಬೇಕು. ಇಲ್ಲವಾದರೆ ನಿಮ್ಮ ದಲಿತ ಪ್ರೀತಿಗೆ ಜನರು ಛೀಮಾರಿ ಹಾಕುತ್ತಾರೆ ಎಂದು ಎಚ್ಚರಿಸಿದರು.

