ಕಾಪು : ಸಂಪೂರ್ಣ ಇಳಕಲ್ ಕೆಂಪು ಶಿಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣೆ ಸಮಿತಿಯ ನೇತೃತ್ವದಲ್ಲಿ ಭಕ್ತರ ಸಹಕಾರದೊಂದಿಗೆ ನಿರ್ಮಾಣಗೊಳ್ಳಲಿರುವ ನೂತನ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ ನೆರವೇರಿಸಲಾಯಿತು.
ಉಡುಪಿಯ ಪ್ರಸಿದ್ಧ ಚಿನ್ನಾಭರಣ ಮಳಿಗೆಯಾದ ಗುಜ್ಜಾಡಿ ಸ್ವರ್ಣ ಜ್ಯುವೆಲರ್ಸ್ ನಲ್ಲಿ ಸುಮಾರು 20 ಕೆ.ಜಿ. ಚಿನ್ನ ಮತ್ತು 160 ಕೆ.ಜಿ. ಬೆಳ್ಳಿಯೊಂದಿಗೆ ಸ್ವರ್ಣ ಗದ್ದುಗೆ ನಿರ್ಮಾಣಗೊಳ್ಳಲಿದೆ.
ಟೆಂಡರ್ ಮೂಲಕ ಗುತ್ತಿಗೆ ಪಡೆದುಕೊಂಡಿರುವ ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್ ನ ದೀಪಕ್ ನಾಯಕ್ ಮತ್ತು ಶೈಲೇಶ್ ನಾಯಕ್ ಅವರಿಗೆ ಕಾಪು ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿ, ಸ್ವರ್ಣ ಗದ್ದುಗೆಯ ಕೆಲಸ ಆರಂಭಿಸಲು ಮುಹೂರ್ತ ನೆರವೇರಿಸಿ ಪ್ರಸಾದ ನೀಡಲಾಯಿತು.
ನವದುರ್ಗಾ ಐಕ್ಯ ಸ್ವರೂಪಿಣೀ ಕಾಪು ಮಾರಿಯಮ್ಮನ ದೇವಸ್ಥಾನದ ನವ ನಿರ್ಮಾಣ ಕಾರ್ಯಗಳೊಂದಿಗೆ ನೂತನ ಸ್ವರ್ಣ ಗದ್ದುಗೆ ಸಮರ್ಪಣೆಗೆ ಯೋಜನೆ ಹಾಕಿಕೊಳ್ಳಲಾಗಿದೆ.
ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಭಕ್ತರಿಗೆ 9 ಗ್ರಾಂ, 18 ಗ್ರಾಂ, 99 ಗ್ರಾಂ, 243 ಗ್ರಾಂ, 450 ಗ್ರಾಂ, 999 ಗ್ರಾಂ ಸ್ವರ್ಣ ಸಮರ್ಪಣೆಗೆ ಅ. 29ರ ವರೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣೆ ಸಮಿತಿ ತಿಳಿಸಿದೆ.

