ಉಡುಪಿ : ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಬೆಳಕಿನ ಹಬ್ಬಕ್ಕೆ ಪಟಾಕಿಯೇ ರಂಗು. ಅಗತ್ಯ ಅಗ್ನಿ ಸುರಕ್ಷತೆಯೊಂದಿಗೆ ಹಬ್ಬ ಆಚರಿಸಲು ಅಗ್ನಿ ಶಾಮಕ ಇಲಾಖೆ ಸಜ್ಜಾಗಿದೆ. ಹಬ್ಬದ ಸಂದರ್ಭ ಅಗ್ನಿ ಅವಘಡ ತಪ್ಪಿಸಲು ಇಲಾಖೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ.
ಕಾಸರಗೋಡಿನ ನೀಲೇಶ್ವರದಲ್ಲಿ ಸಂಭವಿಸಿದ ಅಗ್ನಿ ಅವಘಡ, ಕಳೆದ ವರ್ಷ ಬೆಂಗಳೂರಿನ ಅತ್ತಿಬೆಲೆ, ಹಾವೇರಿಯಲ್ಲಿ ಸಂಭವಿಸಿದ ದುರಂತಗಳ ಹಿನ್ನೆಲೆಯಲ್ಲಿ ಎಲ್ಲೆಡೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದರಂತೆ ಉಡುಪಿ ಜಿಲ್ಲಾಡಳಿತ, ಅಗ್ನಿಶಾಮಕ ಇಲಾಖೆ ಕೂಡಾ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದೆ.
ಜಿಲ್ಲೆಯ ಯಾವುದೇ ಭಾಗದಲ್ಲಿ ಅನಾಹುತ ಸಂಭವಿಸಿದರೂ ಸಿದ್ಧವಾಗಿರುವಂತೆ ಉಡುಪಿ ಅಜ್ಜರಕಾಡು, ಮಲ್ಪೆ, ಕುಂದಾಪುರ, ಬೈಂದೂರು, ಕಾರ್ಕಳದ ಅಗ್ನಿಶಾಮಕ ಠಾಣೆಗಳಿಗೆ ಸೂಚನೆ ನೀಡಲಾಗಿದೆ.
ಸದಾ ಕಾಲ ಎಚ್ಚರದಿಂದ ಇರಬೇಕು, ಎಲ್ಲ ಸಿಬ್ಬಂದಿ 24 ತಾಸು ನಿಗಾ ವಹಿಸಬೇಕು ಎಂದು ತಿಳಿಸಲಾಗಿದೆ. ಈ ಕುರಿತು ವಿಶೇಷ ತರಬೇತಿ ಕೂಡಾ ನೀಡಲಾಗಿದೆ.
ವಾಹನಗಳನ್ನು ಸಜ್ಜಾಗಿಟ್ಟುಕೊಳ್ಳುವುದು, ನೀರು ಸಂಗ್ರಹಿಸಿಟ್ಟುಕೊಳ್ಳುವುದು, ಫೈಯರ್ ಸುರಕ್ಷತೆ ಸಾಧನಗಳನ್ನು ಜಾಗೃತ ಸ್ಥಿತಿಯಲ್ಲಿಡುವುದು ಹೀಗೆ ಠಾಣೆಗಳ ಸಿಬಂದಿ ಸರ್ವ ರೀತಿಯಲ್ಲಿ ಸಜ್ಜಾಗಿರಲು ಕಟ್ಟಪ್ಪಣೆ ನೀಡಲಾಗಿದೆ.
ಹಬ್ಬದ ಸಂದರ್ಭದಲ್ಲಿ ತುರ್ತು ಸೇವೆ ಬೇಕಾಗುವ ಸಾಧ್ಯತೆ ಇರುವುದರಿಂದ ರಜೆ ಮಾಡದಂತೆ ಸುತ್ತೋಲೆ ನೀಡಲಾಗಿದೆ.

