ರಾಜ್ಯದ ಮುಜುರಾಯಿ ಇಲಾಖೆಯಡಿ ‘ಎ’ ಗ್ರೇಡ್ ಗೆ ಒಳಪಡುವ ಬೆಳ್ತಂಗಡಿಯ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾ ಗಣಪತಿ ದೇವಸ್ಥಾನದ ಉಪಭೋಗಕ್ಕಾಗಿ ಖರೀದಿಸಿದ್ದ ಸ್ಥಿರಾಸ್ತಿಗಳನ್ನು, ಅಕ್ರಮವಾಗಿ ಖಾಸಗಿ ಟ್ರಸ್ಟ್ ಗಳಿಗೆ ಹಸ್ತಾಂತರ ಮಾಡಿ ಅವ್ಯವಹಾರ ನಡೆಸಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ನವೆಂಬರ್ 11 ರಂದು ದೇವಸ್ಥಾನದ ವಠಾರದಲ್ಲಿ ಧರಣಿ ನಡೆಸಲಾಗುತ್ತದೆ ಎಂದು ಶ್ರೀ ಕ್ಷೇತ್ರದ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಬರಾಯರವರು ಹೇಳಿದರು.
2004ರಲ್ಲಿ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಮೂವರು ದೇವಸ್ಥಾನಕ್ಕೆಂದು 6ಲಕ್ಷ ರೂ.ಗೆ 3.46ಎಕ್ರೆ ಭೂಮಿಯನ್ನು ಖರೀದಿಸಿದ್ದರು. ಆದರೆ ದೇವಸ್ಥಾನದ ಹೆಸರಲ್ಲಿ ಜಾಗ ಖರೀದಿಗೆ ಕಾನೂನು ತೊಡಕು ಸಂಭವಿಸಿದಾಗ, ವಾಸುದೇವ ಶಬರಾಯರು 1.23ಎಕ್ರೆ, ರಾಘವ 1.23ಎಕ್ರೆ ಹಾಗೂ ವಿಶ್ವನಾಥ 1ಎಕ್ರೆಯನ್ನು ತಮ್ಮ ಹಣದಲ್ಲಿ ಖರೀದಿಸಿದರು. ಬಳಿಕ ಭಕ್ತರ ದೇಣಿಗೆಯಿಂದ ಆ ಹಣವನ್ನು ಅವರಿಗೆ ಹಿಂದುರುಗಿಸಲಾಗಿದೆ. ಹಿಗೆಂದು ಶ್ರೀ ಕ್ಷೇತ್ರದ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಬರಾಯರವರು ಮಾಹಿತಿ ನೀಡಿದ್ದಾರೆ.
ವಿಶ್ವನಾಥ ಅವರು ಈ ಭೂಮಿಯನ್ನು ದೇವಸ್ಥಾನದ ಹೆಸರಿಗೆ ಮಾಡಲು ಹೊರಟಾಗ ಅದು ಕೃಷಿ ಭೂಮಿ ಎಂದು ಕಾನೂನು ತೊಡಕು ಮತ್ತೆ ಎದುರಾಯಿತು. ಆವಾಗ ಈ ಭೂಮಿಯನ್ನು ದೇವಸ್ಥಾನದ ಆಡಳಿತ ಸಮಿತಿ ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಎಂಬ ಹೆಸರಲ್ಲಿ ಟ್ರಸ್ಟ್ ಮಾಡಿದೆ. ಈ ಟ್ರಸ್ಟ್ ಗೆ ವಾಸುದೇವ ಶಬರಾಯರ ದೇವರ ಹೆಸರಿಗೆಂದು ಪಡೆದ 1.23ಎಕ್ರೆ ಭೂಮಿಯನ್ನು ವರ್ಗಾಯಿಸಿದ್ದಾರೆ. ರಾಘವ ಅವರು, ಆರ್ಎಸ್ಎಸ್ ಮುಖಂಡರಾಗಿದ್ದ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದಲ್ಲಿ ಈ ಭೂಮಿಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಗಿಫ್ಟ್ ಡೀಡ್ ಆಗಿ ನೀಡಲಾಗಿತ್ತು. ವಿಶ್ವನಾಥರ ಹೆಸರಲ್ಲಿರುವ ಈ ಭೂಮಿ ದೇವಸ್ಥಾನದ ಹೆಸರಿಗೆ ಬರೆದುಕೊಡಲು ತಾನೂ ಯಾವಾಗಲೂ ಸಿದ್ಧ ಎಂದು ಹೇಳಿದ್ದಾರೆ.
ಪ್ರಸ್ತುತ 3.46 ಎಕ್ರೆ ಭೂಮಿಯಲ್ಲಿರುವ ವಾಣಿಜ್ಯ ಕಟ್ಟಡದ, ವಸತಿ ಗೃಹದ ಬಾಡಿಗೆ ಸೇರಿದಂತೆ ಕೋಟಿಗಟ್ಟಲೆ ಹಣ ಖಾಸಗಿಯವರ ಪಾಲಾಗುತ್ತಿದೆ, ದೇವಸ್ಥಾನದ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟುಕೊಡಬೇಕು. ಎಂದು ನವೆಂಬರ್ 11ರಿಂದ ಸೌತಡ್ಕ ಕ್ಷೇತ್ರದ ಮುಂದೆ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಹೋರಾಟ ನಡೆಯಲಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕ್ಷೇತ್ರದ ಸಂರಕ್ಷಣಾ ವೇದಿಕೆಯ ಉಪಾಧ್ಯಕ್ಷರಾದ ಪ್ರಶಾಂತ್ ರೈ, ಪ್ರಧಾನ ಕಾರ್ಯದರ್ಶಿಯಾದ ಶ್ಯಾಮರಾಜ್, ಕೋಶಾಧಿಕಾರಿಯಾದ ವಿಶ್ವನಾಥ ರವರು ಉಪಸ್ಥಿತರಿದ್ದರು.

