ಉಡುಪಿ : ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ನ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳ ಕುರಿತು ಯಾವುದೇ ರೀತಿಯಲ್ಲಿ ತನಿಖೆ ನಡೆಯಲಿ, ಅದನ್ನು ಸ್ವಾಗತಿಸುತ್ತೇನೆ ಎಂದು ಬ್ಯಾಂಕ್ನ ಅಧ್ಯಕ್ಷರಾಗಿರುವ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಬ್ಯಾಂಕಿನ ಘನತೆಗೆ ಧಕ್ಕೆ ತರುವ ಸಲುವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾಧ್ಯಮಗಳ ಮುಂದೆ ಸುಳ್ಳು ಆಪಾದನೆ ಮಾಡುತ್ತಿದ್ದು, ಬ್ಯಾಂಕ್ ಆಡಳಿತ ಮಂಡಳಿಯು ಕಾನೂನು ಕ್ರಮಕ್ಕೆ ಮುಂದಾಗಿದೆ ಇದರ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಮಹಾಲಕ್ಷ್ಮಿ ಬ್ಯಾಂಕ್ನ ವಿರುದ್ಧ ಮಾಡುತ್ತಿರುವ ಆಧಾರರಹಿತ ಆರೋಪಕ್ಕೆ ಪ್ರತ್ಯುತ್ತರವಾಗಿ, ಶನಿವಾರದಂದು ಬ್ಯಾಂಕ್ನ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ, ಎಲ್ಲಾ ದಾಖಲೆಗಳನ್ನು ಮುಂದಿಟ್ಟು ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಮಹಾಲಕ್ಷ್ಮಿ ಬ್ಯಾಂಕ್ ಸಹಕಾರಿ ಇಲಾಖೆ ಮತ್ತು ಆರ್ಬಿಐ ನಿಯಮಾವಳಿಯಂತೆಯೇ ಸಹಕಾರಿ ತತ್ವದಡಿಯಲ್ಲಿ ಪಾರದರ್ಶಕ ರೀತಿಯಲ್ಲಿ ಬ್ಯಾಂಕಿಂಗ್ ವ್ಯವಹಾರ ವಹಿವಾಟನ್ನು ನಡೆಸುತ್ತಿದೆ. ಮಹಾಲಕ್ಷ್ಮಿ ಬ್ಯಾಂಕ್ನ ವಿರುದ್ಧ ಮಾಡಲಾಗುತ್ತಿರುವ ಆಧಾರರಹಿತ ಆರೋಪಕ್ಕೆ ರಾಜ್ಯ ಸಹಕಾರ ಇಲಾಖೆ ಅಥವಾ ಇ.ಡಿ. , ಸಿ.ಬಿ.ಐ. ಯಾವುದೇ ರೀತಿಯ ಉನ್ನತ ತನಿಖೆ ನಡೆಸಲಿ ಎಂದು ಹೇಳಿದರು.
ಬ್ಯಾಂಕ್ನ ವಿರುದ್ಧ ಆಧಾರರಹಿತವಾಗಿ ಆರೋಪ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ರೀತಿಯಲ್ಲಿಯೆ ಉತ್ತರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರ ನೀಡಿದ್ದಾರೆ.

