ಉಡುಪಿ : ಕುಂದಾಪುರ-ಸಿದ್ಧಾಪುರದ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ, ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿರವರಿಗೆ ಮನವಿ ಸಲ್ಲಿಸಿದ್ದಾರೆ.
ಲೋಕೋಪಯೋಗಿ ಇಲಾಖಾ ಸಚಿವರಿಗೆ ಪತ್ರ ಬರೆದಿರುವ ಮಂಜುನಾಥ ಭಂಡಾರಿಯವರು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಸಂಪರ್ಕ ಕೊಂಡಿಯಾಗಿರುವ ಕುಂದಾಪುರ- ಸಿದ್ಧಾಪುರ ರಾಜ್ಯ ಹೆದ್ದಾರಿಯ ಅಗಲೀಕರಣ ಬೇಡಿಕೆ ಬಹುಕಾಲದಿಂದ ಹಾಗೆ ಉಳಿದಿದೆ. ಚತುಷ್ಪಥ ರಸ್ತೆ ನಿರ್ಮಾಣದ ಸಂದರ್ಭ ಕುಂದಾಪುರ ಸಂಧಿಸುವ ಈ ರಾಜ್ಯ ಹೆದ್ದಾರಿಯನ್ನು ಅಗಲೀಕರಣಗೊಳಿಸಬೇಕು ಎಂಬ ನಾಗರಿಕ ಹೋರಾಟ ಸಮಿತಿಯು ಮಾಡಿಕೊಂಡ ಮನವಿಗೆ ಇದುವರೆಗೆ ಯಾವುದೆ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪರ್ಕ ಏರ್ಪಡಿಸುವ ಬಸ್ರೂರು ಮೂರುಕೈ ಯಿಂದ ಅಂಪಾರುವರೆಗಿನ ರಸ್ತೆಯ ಅಗಲವು ಕಿರಿದಾಗಿದೆ, ಹಾಗು ಪೇಟೆ ಅಭಿವೃದ್ಧಿ ಮತ್ತು ವಾಹನ ದಟ್ಟಣೆಗಳ ಹಿನ್ನೆಲೆಯಲ್ಲಿ ಸಂಚಾರವು ಅಪಾಯಕಾರಿಯಾಗಿ ಪರಿಣಮಿಸಿದೆ. ಘನ ವಾಹನಗಳು ತೀರಾ ಎಚ್ಚರದಿಂದ ಸಂಚರಿಸಬೇಕಾಗಿರುವ ಅನಿವಾರ್ಯತೆ ಉಂಟಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಹೆಮ್ಮಾಡಿ-ಕೊಲ್ಲೂರು ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ಈಗಾಗಲೇ ಅಗಲೀಕರಣಗೊಂಡಿದೆ. ಮತ್ತು ಕೋಟೇಶ್ವರ- ಹಾಲಾಡಿ-ವಿರಾಜಪೇಟೆಯ ಹೆದ್ದಾರಿಯೂ ಅಗಲೀಕರಣಗೊಂಡಿದೆ. ಆದರೆ ಕುಂದಾಪುರ- ಸಿದ್ಧಾಪುರದ ಹೆದ್ದಾರಿಯು ಮಾತ್ರ ಹಿಂದಿನಂತೆಯೇ ಉಳಿದುಕೊಂಡಿರುವುದು ಬೇಸರದ ಸಂಗತಿ. ಇದು ಶಿವಮೊಗ್ಗ- ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿದ್ದರು ಅಭಿವೃದ್ಧಿ ಕಂಡಿಲ್ಲ ಎಂದು ಆರೋಪಿಸಿದರು.

