ಬೆಂಗಳೂರು : ರಾಜ್ಯದಲ್ಲಿ ಸರಿ ಸುಮಾರು 6,158 ಸರ್ಕಾರಿ ಶಾಲೆಗಳಲ್ಲಿ ತಲಾ ಒಬ್ಬರು ಶಿಕ್ಷಕರಿರುವುದು ಸರ್ಕಾರದ ಬೇಜವಾಬ್ದಾರಿ ಎತ್ತಿ ತೋರಿಸುತ್ತದೆ. 6,158 ಸರ್ಕಾರಿ ಶಾಲೆಗಳ ತಲಾ ಒಬ್ಬರು ಶಿಕ್ಷಕರು 1.38 ಲಕ್ಷ ವಿದ್ಯಾರ್ಥಿಗಳ ಜವಾಬ್ದಾರಿ ಹೊಂದಿದ್ದಾರೆ. ಶೂನ್ಯ ದಾಖಲಾತಿ ಹೊಂದಿರುವ 530 ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ, ಆದರೆ 358 ಶಿಕ್ಷಕರಿದ್ದಾರೆ.
ಶೂನ್ಯ ದಾಖಲಾತಿ ಹೊಂದಿರುವ 530 ಶಾಲೆಗಳು! ಇದು ಸರ್ಕಾರಿ ವ್ಯವಸ್ಥೆಯ ಗಂಭೀರ ಲೋಪವನ್ನು ತೋರಿಸುತ್ತದೆ. ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ, ಇನ್ನೂ ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದರು ಹೆಚ್ಚುವರಿ ಶಿಕ್ಷಕರಿದ್ದಾರೆ. ಇದರ ಬಗ್ಗೆ ಪ್ರಶ್ನೆ ಎತ್ತಿದಾಗ, ಶಿಕ್ಷಕರನ್ನು ಅಗತ್ಯವಿರುವ ಕಡೆಗೆ ವರ್ಗಾಯಿಸಲಾಗುತ್ತಿದೆ ಎಂದು ಇಲಾಖೆ ಹೇಳಿದೆ.
ರಾಜ್ಯದಲ್ಲಿ ಒಬ್ಬರೇ ಶಿಕ್ಷಕರನ್ನು ಹೊಂದಿರುವ ಒಟ್ಟು ಶಾಲೆಗಳ ಸಂಖ್ಯೆ 202 ಕ್ಕೆ ಇಳಿಕೆಯಾಗಿದೆ, ಅಂದರೆ 2023-24 ರಲ್ಲಿ 6,360 ರಿಂದ 2024-25ರಲ್ಲಿ 6,158 ಕ್ಕೆ ಇಳಿದಿದೆ, ಇದು ಶುಭ ಸುದ್ದಿ. ಆದರೆ ದಾಖಲಾತಿಯ ಪ್ರಮಾಣದಲ್ಲಿ 33,794 ರಷ್ಟು ಕಡಿಮೆಯಾಗಿರುವುದು ವಿಷಾದನೀಯ.
ಕೆಲವೊಂದು ಶಾಲೆಗಳಲ್ಲಿ ಕನ್ನಡ ಅಥವಾ ಸಮಾಜಶಾಸ್ತ್ರವನ್ನು ಕಲಿಸಲು ಮಾತ್ರ ಶಿಕ್ಷಕರಿದ್ದಾರೆ, ಪ್ರಮುಖ ವಿಷಯಗಳಾದ ಗಣಿತ ವಿಜ್ಞಾನ ಅಥವಾ ಇಂಗ್ಲಿಷ್ಗೆ ಶಿಕ್ಷಕರಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.
ಚೈಲ್ಡ್ ರೈಟ್ಸ್ ಟ್ರಸ್ಟ್ನ ಕಾರ್ಯನಿರ್ವಾಹಕರಾದ ವಾಸುದೇವ್ ಶರ್ಮಾ ರವರು ಮಾತನಾಡಿ, ಪೋಷಕರು ತಮ್ಮ ಮಕ್ಕಳು ಇಂಗ್ಲೀಷ್, ಗಣಿತ ಮತ್ತು ವಿಜ್ಞಾನವನ್ನು ಕಲಿಸುವ ಶಾಲೆಗಳಿಗೆ ಹೋಗಬೇಕೆಂದು ಬಯಸುತ್ತಾರೆ ಆದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಅನೇಕ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಅನುದಾನಿತ ಅಥವಾ ಖಾಸಗಿ ಶಾಲೆಗಳತ್ತ ಒಲವು ತೋರುತ್ತಿದ್ದಾರೆ ಎಂದು ತಿಳಿಸಿದರು.
ಅಭಿವೃದ್ಧಿ ಶಿಕ್ಷಣತಜ್ಞರಾದ ಪ್ರಾಧ್ಯಾಪಕ ನಿರಂಜನಾರಾಧ್ಯ ವಿಪಿ ಮಾತನಾಡಿ, ಕಿರಿಯ ಪ್ರಾಥಮಿಕ ಶಾಲೆಗಳು ಕನಿಷ್ಠವೆಂದರು ಇಬ್ಬರು ಶಿಕ್ಷಕರನ್ನು ಹೊಂದಿರಬೇಕು, ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಕನಿಷ್ಠವೆಂದರು ಮೂವರು ಶಿಕ್ಷಕರನ್ನು ಹೊಂದಿರಬೇಕು ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಸುಮಾರು 5,000 ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಚಾಲನೆ ನೀಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಕೆ.ವಿ.ತ್ರಿಲೋಕಚಂದ್ರರವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ. ಈ ಚಾಲನೆಯು ವಿಶೇಷವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿನ ಶಿಕ್ಷಕರ ಕೊರತೆಯನ್ನು ಪರಿಹರಿಸುವ ಉದ್ದೇಶವನ್ನು ಹೊಂದಿದ್ದು, ಖಾಸಗಿ, ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೂ ಈ ಚಾಲನೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

