ಕಳಪೆ ಕಾಮಗಾರಿಯ ಕಾರಣದಿಂದ ಬಹುತೇಕ ಹೆಚ್ಚಿನ ಕಡೆಗಳಲ್ಲಿ ರಸ್ತೆ ಗುಂಡಿಗಳದ್ದೇ ಸಮಸ್ಯೆ. ಹದಗೆಟ್ಟ ರಸ್ತೆಗಳ ಕಾರಣದಿಂದ ಸಾವು, ನೋವುಗಳು ಸಂಭವಿಸಿದರೂ ಇದಕ್ಕೆ ಸಂಬಂಧಪಟ್ಟವರಂತೂ ರಸ್ತೆ ದುರಸ್ತಿ ಮಾಡುವ ಕಾರ್ಯಕ್ಕೆ ಕೈ ಕೂಡಾ ಹಾಕಲ್ಲ. ಇದರಿಂದ ರೋಸಿ ಹೋಗಿ ಜನರೇ ಈ ಗುಂಡಿಗಳಲ್ಲಿ ಗಿಡ ನೆಟ್ಟು, ಗುಂಡಿಗಳಲ್ಲಿ ಕುಳಿತು ಮೃತ್ಯುಕೂಪದಂತಿರುವ ರಸ್ತೆ ಗುಂಡಿಗಳನ್ನು ಸರಿ ಮಾಡುವಂತೆ ವಿನೂತನ ಮಾದರಿಯಲ್ಲಿ ಪ್ರತಿಭಟನೆಗಳನ್ನು ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಬಲಿಗಾಗಿ ಕಾದಿರುವ ರಸ್ತೆಗುಂಡಿಯಲ್ಲಿ ಬಾಳೆ ಗಿಡ ನೆಡುವ ಮೂಲಕ ಜನರೇ ರಸ್ತೆ ಗುಂಡಿಯನ್ನು ಮುಚ್ಚಿ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಕುರಿತ ವೀಡಿಯೋ ವೈರಲ್ ಆಗಿದೆ.
ಈ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ವಿವೇಕಾನಂದ ಕಾಲೇಜು ಕ್ಯಾಂಪಸ್ ರಸ್ತೆಯಲ್ಲಿ, ರೋಡ್ ಮಧ್ಯದಲ್ಲಿ ಮೃತ್ಯು ಕೂಪದಂತಿದ್ದ ಹೊಂಡವನ್ನು ಸಂಬಂಧಪಟ್ಟ ಅದಿಕಾರಿಗಳು ಸರಿಪಡಿಸದೇ ಇದ್ದ ಕಾರಣ ಸ್ಥಳೀಯರು ಆ ಗುಂಡಿಯಲ್ಲಿ ಬಾಳೆ ಗಿಡ ನೆಟ್ಟು, ಗುಂಡಿಯನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಬಳಿಕ ಜೆಸಿಬಿ ಮೂಲಕ ಬಾಳೆ ಗಿಡವನ್ನು ತೆರವು ಗೊಳಿಸಿ ಅಲ್ಲಿಂದಲ್ಲಿಗೆ ಗುಂಡಿ ಮುಚ್ಚುವ ಕಾರ್ಯ ನಡೆದಿದೆ.

