ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಕಳದ ಶಾಸಕರಾದ ಸುನೀಲ್ ಕುಮಾರ್ ರವರು, ಸರ್ಕಾರ ಮತ್ತು ಪೊಲೀಸರ ಕಾರ್ಯಚರಣೆಯನ್ನು ಸ್ವಾಗತಿಸುತ್ತೇನೆ. ಅನೇಕ ವರ್ಷಗಳಿಂದ ಸ್ತಬ್ದವಾಗಿದ್ದ ನಕ್ಸಲ್ ಚಟುವಟಿಕೆಗಳು ಕಳೆದ ಒಂದೂವರೆ ವರ್ಷದಿಂದ ಮತ್ತೆ ಶುರುವಾಗಿದೆ. ಇದರಲ್ಲಿ ನಗರ ನಕ್ಸಲ್ಗಳು, ಕಾಡಿನಲ್ಲಿ ಕೂತು ಬಂದೂಕು ಹಿಡಿದು ಕಾರ್ಯಚರಣೆ ಮಾಡುವವರು ಇದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ನಾವು ನಕ್ಸಲ್ ಚಟುವಟಿಕೆಗಳನ್ನು ಮಟ್ಟ ಹಾಕಿದ್ದೆವು. ನಮ್ಮ ಸರ್ಕಾರದ ಅವಧಿಯಲ್ಲಿ ಇವರೆಲ್ಲ ಹೊರ ರಾಜ್ಯಗಳಲ್ಲಿ ತಲೆಮರಿಸಿಕೊಂಡಿದ್ದರು. ಈ ಸರ್ಕಾರ ಬಂದ ಮೇಲೆ ಮತ್ತೆ ತಮ್ಮ ಚಟುವಟಿಕೆಗಳನ್ನು ಶುರು ಮಾಡಲು ಬಂದಿದ್ದಾರೆ. ನಗರ ನಕ್ಸಲ್ ಚಟುವಟಿಕೆಗಳ ಬಗ್ಗೆಯು ಸರ್ಕಾರ ಗಮನ ಹರಿಸಬೇಕು. ಬುದ್ಧಿ ಜೀವಿಗಳು ನಕ್ಸಲ್ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಾರೆ ಎಂದು ಆರೋಪಿಸಿದರು.
ನಕ್ಸಲರನ್ನು ಮಟ್ಟ ಹಾಕಬೇಕು. ಕ್ಷಮೆ ಕೋರುವ ವಿಚಾರದಲ್ಲಿ ಸರ್ಕಾರ ಚರ್ಚೆ ನಡೆಸಬೇಕು. ನಕ್ಸಲ್ ಚಟುವಟಿಕೆಗಳು ನಗರಕ್ಕೆ ಬಾರದ ಹಾಗೆ ನಿಗಾವಹಿಸಬೇಕು. ನಕ್ಸಲ್ ನಿಗ್ರಹ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಬೇಕು ಎಂದು ತಿಳಿಸಿದರು.

