ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಟೆಂಡರ್ ವಿಳಂಬದಿಂದಾಗಿ 250 ರೀತಿಯ ಔಷಧಗಳ ಪೂರೈಕೆ ಸ್ಥಗಿತಗೊಂಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಮುಂದುವರೆದಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಈಗ ಅಲ್ಬುಮಿನಿ, ಆ್ಯಂಪ್ಸಿಲಿನ್, ಲೆವೊಥೈರಾಕ್ಸಿನ್, ವಿಲ್ಡಗ್ಲೀಪ್ಟನ್, ಪ್ಯಾರಸಿಟಮಲ್, ನ್ಯುಸ್ಟೊಜಿಮೈನ್, ಸಬ್ಲೋಟೊಮಲ್, ಅಸ್ಟೊಪೈನ್ ಸೇರಿದಂತೆ ವಿವಿಧ ಔಷಧಗಳ ಪೂರೈಕೆ ಕಡಿತವಾಗಿದೆ. ಟೆಂಡರ್ ವಿಳಂಬದಿಂದಲೇ ಈ ಸಮಸ್ಯೆ ಉಂಟಾಗಿದೆ ಎಂದು ಮಾಹಿತಿ ಬಂದಿದೆ.
ಆರೋಗ್ಯ ಇಲಾಖೆಯ ಅಧಿಕಾರಿಗಳು ಇದನ್ನು ನಿರಾಕರಿಸಿದ್ದು, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಔಷಧ ಖರೀದಿಗೆ ಟೆಂಡರ್ ಕರೆಯಲು ವಿಳಂಬವಾಗಿರುವುದು ನಿಜ ಆದರೆ 44 ಬಗೆಯ ಅಗತ್ಯ ಔಷಧಗಳೊಂದಿಗೆ ಹಲವು ಔಷಧಿಗಳನ್ನು ಸ್ಥಳೀಯವಾಗಿಯೇ ಖರೀದಿ ಮಾಡಲು ಅನುಮತಿ ನೀಡಲಾಗಿರುತ್ತದೆ. ಉಳಿದಂತೆ ತುರ್ತು ಔಷಧಗಳ ದಾಸ್ತಾನು ಕೂಡ ಲಭ್ಯವಿದೆ, ಮತ್ತು ಶೇ.70ರಷ್ಟು ಔಷಧಗಳು ಲಭ್ಯವಿವೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರು, ನಮ್ಮ ಸರ್ಕಾರವು ಬಂದ ಆರಂಭದಲ್ಲಿ ಶೇ.40ರಷ್ಟು ಔಷಧಗಳು ಮಾತ್ರ ಸಿಗುತ್ತಿದ್ದವು, ಉಳಿದ ಔಷಧಿಗಳನ್ನು ಆಸ್ಪತ್ರೆಗಳಲ್ಲೇ ಖರೀದಿ ಮಾಡಲಾಗುತ್ತಿತ್ತು. ಆದರೆ ಈಗ ಶೇ.75ರಷ್ಟು ವೈದ್ಯಕೀಯ ಸರಬರಾಜು ನಿಗಮದಿಂದಲೇ ಔಷಧಿಗಳು ಪೂರೈಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

