ಮಂಗಳೂರು: ಬೀದಿ ಬದಿ ವ್ಯಾಪಾರಿಗಳನ್ನು ಎಬ್ಬಿಸಿ ಅವರ ಅಂಗಡಿ, ಮುಂಗಟ್ಟುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು, ಈ ವಿಚಾರವಾಗಿ ವಿಶ್ಲೇಷಣೆಯೊಂದು ವ್ಯಕ್ತವಾಗಿದೆ.
ಘಟನೆಯ ಕುರಿತು ಕೆಲ ಫೋಟೋಗಳ ಸಹಿತ ನ್ಯಾಯ ಎಲ್ಲಿದೆ ಎಂಬ ಶೀರ್ಷಿಕೆಯಡಿ ಸಂದೇಶವೊಂದು ವೈರಲ್ ಆಗುತ್ತಿದೆ.
ವೈರಲ್ ಸಂದೇಶದಲ್ಲಿ ಏನಿದೆ?
ನ್ಯಾಯ ಎಲ್ಲಿದೆ ?
ಬಡವನಿಗೆ ಒಂದು ಕಾನೂನು , ಎ.ಸಿ ರೂಮಿನಲ್ಲೇ ಶಾಸಕನಿಗೆ ಅಧಿಕಾರಿಗಳಿಗೆ ಅದೇಶ ನೀಡುವ ಶ್ರೀಮಂತ ಲೂಟಿಕೋರ ಬಿಸ್ನೆಸ್ ಮೆನ್ ಗಳಿಗೊಂದು ಕಾನೂನು …ಇದಪ್ಪಾ ಉಳ್ಳಾಲ ಕ್ಷೇತ್ರ..
ಮನೆಯಲ್ಲಿ ರೋಗಿಯಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಿದೆ. ನಿತ್ಯಧ ಖರ್ಚು ದಿನದ ದುಡಿಮೆಯಿಂದ ಅಸಾಧ್ಯ. ಚಹಾ ಮಾರಾಟ ಮಾಡಿದ ಆದಾಯದಿಂದಲೇ ಆಸ್ಪತ್ರೆಯ ಖರ್ಚಿನ ಜೊತೆಗೆ ಕುಟುಂಬ ಸಾಗುತಿತ್ತು. ಆದರೆ ನ.22 ರಂದು ಮಂಗಳೂರು ಪಿಡಬ್ಲೂಡಿಯ ಅಧಿಕಾರಿಗಳು, ಗ್ರಾಹಕರು ಚಹಾ ಕುಡಿಯುತ್ತಿದ್ದ ವೇಳೆಯೇ ಜೆಸಿಬಿಯನ್ನು ಘರ್ಜಿಸಿ ಶೀಟಿನಿಂದ ತುಂಬಿದ ಚಹಾ ಮಾರಾಟದ, ಜೀವನವನ್ನು ಚೇತರಿಕೆಗೊಳಿಸಲು ಇದ್ದಂತಹ ಅಸ್ತ್ರವನ್ನೇ ಮುರಿದುಹಾಕಿತು. ಇದು ಮಾನವೀಯತೆಗೆ ಕೊಳ್ಳಿಯಿಟ್ಟ ಭೂಮಿಯಲ್ಲಿ ಬದುಕುವುದೇ ಬೇಡ ಅಂಥ ನಿರ್ಧರಿಸಿದ ದಿನ. ಆತ್ಮವಿಶ್ವಾಸದ ಬಾಳಿಗೆ ದಫನ ಭೂಮಿಯ ಮಣ್ಣಿನ ಘಾಟನ್ನು ಜೆಸಿಬಿಯ ಘರ್ಜನೆ ಕಣ್ಣ ಮುಂದಿರಿಸಿತು. ಸಾಲದ ಹೊರೆ ತಲೆಕೆಳಗಾಗಿಸಿದೆ. ದಾರಿ ತೋರದಂತಾಗಿದೆ. ಅಂಗಡಿಯಿಡುವಾಗಲೇ ಅಧಿಕಾರಿಗಳು ಹೇಳುತ್ತಿದ್ದರೆ, ದಾರಿ ಕಟ್ಟಿಕೊಳ್ಳುತ್ತಿದ್ದೆವು. ಆದರೆ ಹಗ್ಗದ ಮೇಲಿನ ನಡಿಗೆಯ ಜೀವನಕ್ಕೆ ಬಂಡೆಕಲ್ಲನ್ನೇ ತಲೆಗೆ ಹಾಕಿ ಕೊಂದೇ ಬಿಟ್ಟಿದ್ದಾರೆ. ಸಾಯಲಿ ದಾರಿಯುದ್ದಕ್ಕೂ ಆಸ್ಪತ್ರೆ ವೈದ್ಯಕೀಯ ಕಾಲೇಜುಗಳ ಗೇಟುಗಳು, ಕಂಪೌಂಡ್ ವಾಲುಗಳು ರಸ್ತೆಗೆ ತಾಗಿಕೊಂಡೇ ಇದ್ದರೂ, ಕಣ್ಣಿದ್ದು ಕುರುಡರಾದ ಅಧಿಕಾರಿಗಳು, ಸಾಮಾನ್ಯ ಪ್ರಜೆಯ ಗಂಜಿಯೂಟದ ಹಕ್ಕನ್ನೇ ಕಸಿದಿದ್ದಾರೆ. ರಸ್ತೆ ಅಗಲೀಕರಣವಾದರೆ ಸರಿ, ಚರಂಡಿ ನಿರ್ಮಿಸುವುದಾದರೂ ಸರಿ, ಅಭಿವೃದ್ಧಿಗೆ ನಮ್ಮ ಅಡ್ಡಿಯಿಲ್ಲ. ಆದರೆ ಯಾರೋ ಬಂಡವಾಳಶಾಹಿಯ ದುರಾಸೆಯ ಕಾಂಚಾಣಕ್ಕೆ ಕುಣಿದ ಅಧಿಕಾರಿ ವರ್ಗ ತಾವು ತಿನ್ನುವ ಒಂದು ಅನ್ನ, ಹುಟ್ಟಿಸಿದ ತಾಯಿ , ಮಮತೆಯ ಮಕ್ಕಳ ಮುಖಗಳಲ್ಲಿ ನಮ್ಮ ಹಸಿವನ್ನಾದರೂ ಕಂಡುಕೊಳ್ಳಿ. ನ್ಯಾಯವೆಂದರೆ ಎಲ್ಲರಿಗೂ ಸಮಾನ. ಕೆ.ಸಿ.ರೋಡು, ತಲಪಾಡಿ ಭಾಗದಲ್ಲಿ ಜೆಸಿಬಿಯ ವರ್ತನೆ ಅತಿಯಾದಾಗ ಧ್ವನಿಯೆತ್ತಿದ ಇಂಕಿಲಾಬ್ ಅನ್ನುವ ಧ್ವನಿಯೂ ಮರೆಯಾಗಿದೆ.
ಬೀದಿಬದಿಯ ವ್ಯಾಪಾರಿಗಳು ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಎಂದು ಬರೆದಿರುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.

