ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣ ಕೇರಳ ಸಿಎಂ ಅಂಗಳಕ್ಕೆ ತಲುಪಿದೆ.
ಬಿಜು ಮೋನು ಸಾವಿನ ಬಗ್ಗೆ ಸಂಶಯ ಇದೆ ಎಂದು ಮೃತ ಕುಟುಂಬ ಗಂಭೀರ ಆರೋಪ ಮಾಡಿದೆ. ಬೆಂಗಳೂರಿನ ಸಿಐಡಿ ಇನ್ಸ್ಪೆಕ್ಟರ್ಗೆ ಪತ್ರ ಬರೆದು ಸಮಗ್ರ ತನಿಖೆ ನಡೆಸಿ ನ್ಯಾಯ ಕೊಡಿ ಎಂದು ಮನವಿ ಮಾಡಿದೆ.
ನವೆಂಬರ್ 9 ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣದಲ್ಲಿ ಕೇರಳ ಮೂಲದ ಬಿಜು ಮೋನು ಮೃತಪಟ್ಟಿದ್ದ. ಮದ್ಯಪಾನ ಮಾಡಿ ಮಹಿಳೆಗೆ ಕಿರುಕುಳ ಕೊಟ್ಟ ಆರೋಪಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕುಸಿದುಬಿದ್ದು ಸಾವು ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿ ಬರುವ ಮೊದಲೇ ಕುಟುಂಬ ಗಂಭೀರ ಆರೋಪ ಮಾಡಿದೆ. ಆರೋಪಿ ಮೈ ಮೇಲೆ ಪೊಲೀಸ್ ಏಟಿನ ಗಂಭೀರ ಗಾಯಗಳ ಗುರುತು ಇತ್ತು. ಲಾಠಿ ಮತ್ತು ಶೂಗಳಿಂದ ಹಲ್ಲೆ ಮಾಡಲಾಗಿತ್ತು ಎಂಬ ಅರ್ಥದಲ್ಲಿ ಕುಟುಂಬ ದೂರಿದೆ.
ಮೊಣಕಾಲಿನ ಕೆಳಗೆ ಲಾಠಿ ಏಟಿನ ರೀತಿಯ ಗಾಯದ ಗುರುತು ಇದೆ. ಲಾಕಪ್ ಡೆತ್ ಪ್ರಕರಣವನ್ನು ಅಸಹಜ ಸಾವು ಎಂದು ಪೊಲೀಸರು ಬಿಂಬಿಸಲು ಪ್ರಯತ್ನಪಟ್ಟಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸರ ವಿರುದ್ಧ ಬಿಜು ಮೋನು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದು ಮಾತ್ರವಲ್ಲ, ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಈ ಬಗ್ಗೆ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ.
ಬಿಜು ಮೋನು ಸಹೋದರ ಬಿನು ಯೋಹನ್ನಾನ್ ಈ ಕುರಿತು ಮಾತನಾಡಿದ್ದು, ನಾವು ಮೃತದೇಹ ನೋಡದಂತೆ ಪೊಲೀಸರು ಶವಗಾರದಲ್ಲಿ ಲೈಟ್ ಆಫ್ ಮಾಡಿದ್ದರು. ಮೊಬೈಲ್ ಬೆಳಕಿನಲ್ಲಿ ನೋಡಿದಾಗ ಮೊಣಕಾಲಿನ ಕೆಳಗೆ ಬಹಳಷ್ಟು ಗಾಯದ ಗುರುತುಗಳಿತ್ತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮತಿ ಮೇರೆಗೆ ಮೃತದೇಹ ಪರಿಶೀಲಿಸಲಾಗಿತ್ತು. ದೇಹದಲ್ಲಿ ಸಾಕಷ್ಟು ಗಾಯದ ಗುರುತುಗಳು ಕಂಡು ಬಂದಿದ್ದವು. ನನ್ನ ಸಹೋದರನನ್ನು ಪೊಲೀಸರು ಕಾನೂನು ಪ್ರಕಾರವಾಗಿ ವಶಕ್ಕೆ ಪಡೆದ ಬಗ್ಗೆ ಅನುಮಾನವಿದೆ. ಮಹಿಳೆಯೋರ್ವಳ ದೂರಿನ ಹಿನ್ನೆಲೆಯಲ್ಲಿ ನನ್ನ ಸಹೋದರನನ್ನು ಬಂಧಿಸಲಾಗಿದೆ ಎಂದಿದ್ದರು. ದೂರು ಕೊಟ್ಟ ಮಹಿಳೆ ಯಾರು? ಅವರು ಕೊಟ್ಟ ದೂರಿನ ಕಾಪಿ ಬಗ್ಗೆ ಮಾಹಿತಿ ನೀಡಿಲ್ಲ. ಇವೆಲ್ಲವನ್ನೂ ನಾವು ಕೇರಳ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. ಅಸಹಜ ಸಾವು ಎಂದು ಕೇರಳ ಮುಖ್ಯಮಂತ್ರಿಗೆ ದೂರು ನೀಡಿದ್ದೇವೆ.
ಬ್ರಹ್ಮಾವರ ಪೊಲೀಸರ ಮೇಲೆ ತುಂಬಾ ಅನುಮಾನವಿದೆ. ಸಿಐಡಿ ಅಧಿಕಾರಿಗಳು ಹೇಳಿಕೆ ದಾಖಲಿಸಿದ್ದೇವೆ. ನಮಗೆ ತುಂಬಾ ಮಂದಿ ಕರೆ ಮಾಡಿ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದರು. ಈ ಬಗ್ಗೆಯೂ ನಾವು ಸಿಐಡಿಗೆ ಮಾಹಿತಿ ನೀಡಿದ್ದೇವೆ. ನಮಗೆ ನ್ಯಾಯ ಬೇಕು, ಪೊಲೀಸರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

