ಪುತ್ತೂರು : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಡಿ.4 ರಂದು ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಮಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ವಿಶ್ವಹಿಂದೂ ಪರಿಷತ್ ಬೆಂಬಲ ನೀಡಿದೆ. ಪುತ್ತೂರಿನಿಂದ ಸುಮಾರು 2 ಸಾವಿರ ಮಂದಿ ಮಂಗಳೂರಿಗೆ ತೆರಳುವ ನಿರೀಕ್ಷೆಯಿದೆ ಎಂದು ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ ಅಧ್ಯಕ್ಷರಾದ ಡಾ. ಕೃಷ್ಣಪ್ರಸನ್ನ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಇಸ್ಲಾಂ ಮೂಲಭೂತವಾದಿಗಳು ಶೋಷಣೆ ನಡೆಸುತ್ತಿದ್ದಾರೆ. ಹೋರಾಟ ಮಾಡಿದ ಇಸ್ಕಾನ್ ಸ್ವಾಮೀಜಿ ಚಿನ್ಮೋಯ್ ಕೃಷ್ಣದಾಸ್ ರನ್ನು ಬಂಧಿಸಲಾಗಿದೆ. ಈ ಕೃತ್ಯಗಳನ್ನು ವಿಹಿಂಪ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೀಗಾಗಿ ಹಿಂದೂ ಹಿತರಕ್ಷಣಾ ಸಮಿತಿಯ ವತಿಯಿಂದ ಡಿ.4 ರಂದು ಬೆಳಿಗ್ಗೆ ಮಂಗಳೂರು ಜ್ಯೋತಿ ಅಂಬೇಡ್ಕರ್ ವೃತ್ತದಿಂದ ಹಿಡಿದು ಮಿನಿ ವಿಧಾನಸೌಧದ ಕಚೇರಿಯವರೆಗೆ ಪ್ರತಿಭಟನೆಯ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭ ವಿಹಿಂಪ ಜಿಲ್ಲಾ ಕೋಶಾಧಿಕಾರಿಯಾದ ಮಾಧವ ಪೂಜಾರಿ, ಜಿಲ್ಲಾ ಸಹ ಕಾರ್ಯದರ್ಶಿಯಾದ ಶ್ರೀಧರ್ ತೆಂಕಿಲ, ಬಜರಂಗದಳದ ಜಿಲ್ಲಾ ಸಂಯೋಜಕರಾದ ಭರತ್ ಕುಮ್ಡೇಲ್, ವಿಹಿಂಪ ನಗರ ಅಧ್ಯಕ್ಷರಾದ ದಾಮೋದರ್ ಪಾಟಾಳಿ ಉಪಸ್ಥಿತರಿದ್ದರು.

