ಬೈಂದೂರು : ಅಗ್ನಿಶಾಮಕ ಠಾಣೆಯ ಸ್ವಂತ ಕಟ್ಟಡದ ಕಾಮಗಾರಿಯು ಪೂರ್ಣಗೊಂಡಿದೆ, ಮೇಲಧಿಕಾರಿಗಳ ಆದೇಶವಾದ ಕೂಡಲೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿಯಾದ ವಿನಾಯಕ ಕಲ್ಗುಟ್ಕರ್ ತಿಳಿಸಿದ್ದಾರೆ.
ಬೈಂದೂರಿಗೆ ಅಗ್ನಿಶಾಮಕ ಠಾಣೆ ಕಟ್ಟಡ ಬೇಕು ಎಂಬ ಸಾರ್ವಜನಿಕರ ಬೇಡಿಕೆಯು ಈಡೇರಿದೆ. ಸರಕಾರದಿಂದ ಮಂಜೂರಾಗಿರುವ ಮೂರು ಕೋಟಿ ರೂ. ಅನುದಾನದಲ್ಲಿ ಒಂದು ಎಕರೆ ಜಾಗದಲ್ಲಿ ಕಟ್ಟಡದ ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ.
ಬೈಂದೂರಿನಲ್ಲಿ ಅಗ್ನಿ ಶಾಮಕ ಠಾಣೆಯು ಪ್ರಾರಂಭಗೊಂಡು ನಾಲ್ಕು ವರ್ಷವಾಗಿದ್ದರೂ ಸ್ವಂತ ಕಟ್ಟಡ ಇರಲಿಲ್ಲ. ಕರ್ನಾಟಕ ಪೋಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ನೂತನ ಕಟ್ಟಡ ನಿರ್ಮಾಣವಾಗಿದೆ.
2015-16ರಲ್ಲಿ ಅಂದಿನ ಶಾಸಕರಾದ ಕೆ. ಗೋಪಾಲ ಪೂಜಾರಿಯವರು ಯೋಜನಾ ನಗರದ ಸಮೀಪ ಒಂದು ಏಕ್ರೆ ಜಾಗವನ್ನು ಗುರುತಿಸಿ, ಸರ್ಕಾರದಿಂದ ಮಂಜೂರಾತಿಯನ್ನು ಒದಗಿಸಿದ್ದರು. ಆದರೆ ತಾಂತ್ರಿಕ ಕಾರಣಾಂತರಗಳಿಂದ ಸರ್ಕಾರದ ಅನುಮೋದನೆಯು ವಿಳಂಬವಾಯಿತು. 2020ರಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಮತ್ತು ಅಂದಿನ ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿ ಅವರ ಪ್ರಯತ್ನದಿಂದ ಬೈoದೂರಿಗೆ ಒಂದು ಅಗ್ನಿಶಾಮಕ ಠಾಣೆಯು ಮಂಜೂರಾಗಿತ್ತು.

