ಕುಂದಾಪುರ: ವ್ಯವಹಾರದಲ್ಲಿ ಉಂಟಾದ ನಷ್ಟ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಸಾಲ ಮರುಪಾವತಿಸಲಾಗದೆ ಮನನೊಂದ ವ್ಯಕ್ತಿಯೊಬ್ಬರು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ಕರಿಕಲ್ ಕಟ್ಟೆಯಲ್ಲಿ ನಡೆದಿದೆ.
ಮೃತರನ್ನು ದಿವಾಕರ ಕೃಷ್ಣ ಶೆಟ್ಟಿ (34) ಎಂದು ಗುರುತಿಸಲಾಗಿದೆ. ಇವರು ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ಕರಿಕಲ್ ಕಟ್ಟೆಯಲ್ಲಿರುವ ತಮ್ಮ ಅತ್ತೆಯ ಮನೆಯಲ್ಲಿ ವಾಸವಾಗಿದ್ದು, ಕ್ಯಾಟರಿಂಗ್ ವ್ಯವಹಾರ ನಡೆಸುತ್ತಿದ್ದರು. ವ್ಯವಹಾರದ ಉದ್ದೇಶಕ್ಕಾಗಿ ಬ್ಯಾಂಕ್ ಆಫ್ ಬರೋಡಾದ ಕಂಡ್ಲೂರು ಶಾಖೆಯಲ್ಲಿ 10 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದಲ್ಲದೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಇದೇ ವಿಚಾರದಿಂದ ಮನನೊಂದಿದ್ದ ದಿವಾಕರ ಶೆಟ್ಟಿ ಅವರು ಅಕ್ಟೋಬರ್ 30ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕರಿಕಲ್ ಕಟ್ಟೆಯಲ್ಲಿರುವ ಮನೆಯಲ್ಲಿ ಇಲಿ ಪಾಷಾಣ ಸೇವಿಸಿದ್ದರು. ತಕ್ಷಣ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 31ರಂದು ಸಂಜೆ 5.40ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ಸಂಖ್ಯೆ 37/2026, ಕಲಂ 194 ಬಿಎನ್ಎಸ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

