ಮಂಗಳೂರು: ಪೊಲೀಸ್ ವಿಚಾರಣೆಯಿಂದ ತೀವ್ರ ಮನನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಸ್ಥಳೀಯರು ಮೃತದೇಹವನ್ನು ಸುರತ್ಕಲ್ ಪೊಲೀಸ್ ಠಾಣೆಯ ಮುಂಭಾಗವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಪ್ರಕರಣದ ಹಿನ್ನೆಲೆಯಲ್ಲಿ ಅಕ್ಟೋಬರ್ 25ರಂದು ರಾತ್ರಿ ಹೊಸಬೆಟ್ಟು ಬೀಚ್ ಬಳಿ ಸಂಶಯಾಸ್ಪದವಾಗಿ ಕಂಡುಬಂದಿದ್ದ ಜೋಡಿಯೊಂದನ್ನು ಸೋಮನಾಥ್ ಎಂಬುವವರು ಪ್ರಶ್ನಿಸಿದ್ದರೆನ್ನಲಾಗಿದೆ. ಈ ಕುರಿತು ಯುವತಿಯೊಬ್ಬರು ನೀಡಿದ ದೂರಿನನ್ವಯ ಪೊಲೀಸರು ಸೋಮನಾಥ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಕಳುಹಿಸಿದ್ದರು. ಆದರೆ, ಪೊಲೀಸ್ ದೌರ್ಜನ್ಯ ಹಾಗೂ ವಿಚಾರಣೆಯ ಕಿರುಕುಳದಿಂದ ಬೇಸತ್ತು ಸೋಮನಾಥ್ ಮಂಗಳವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಆಕ್ರೋಶಗೊಂಡ ನೂರಾರು ಜನರು ಠಾಣೆ ಎದುರು ಧರಣಿ ನಡೆಸಿದರು.
ಈ ಪ್ರತಿಭಟನೆಯಿಂದಾಗಿ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸವಾರರು ತೀವ್ರ ಸಂಕಷ್ಟ ಅನುಭವಿಸಿದರು.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಭೇಟಿ ನೀಡಿ, ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಪೊಲೀಸ್ ವಿಚಾರಣೆ ಹಾಗೂ ವ್ಯಕ್ತಿಯ ಸಾವಿನ ನಡುವಿನ ಸಂಬಂಧದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಸ್ಥಳೀಯರು ಹಾಗೂ ಶಾಸಕರು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ ಘಟನೆ ಕುರಿತು ಸ್ಪಷ್ಟನೆ ನೀಡಿರುವ ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, “ಅಕ್ಟೋಬರ್ 25 ರಂದು ಹೊಸಬೆಟ್ಟು ಬೀಚ್ಗೆ ತೆರಳಿದ್ದ ಜೋಡಿಗೆ ಸೋಮನಾಥ್ ಹಾಗೂ ಅವರ ಸಂಗಡಿಗರು ಕಿರುಕುಳ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ವಿಧಿಸಬಹುದಾದ ಶಿಕ್ಷೆಯ ಅವಧಿ ಮೂರು ವರ್ಷಕ್ಕಿಂತ ಕಡಿಮೆಯಿದ್ದ ಕಾರಣ ಸೋಮನಾಥ್ ಅವರಿಗೆ ನಿಯಮಾನುಸಾರ ನೋಟೀಸ್ ನೀಡಲಾಗಿತ್ತಷ್ಟೇ. ಆದರೆ, ಅವರು ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

