ಕೋಟ: ರಾಷ್ಟ್ರೀಯ ಹೆದ್ದಾರಿ 66ರ ಕೋಟ ಜಂಕ್ಷನ್ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸೈಕಲ್ ಸವಾರ, ಸ್ಥಳೀಯ RSS ಮುಖಂಡ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.
ಕೋಟ ಮಣೂರು ನಿವಾಸಿ, ಆರ್ಎಸ್ಎಸ್ ಮುಖಂಡ ಗುರುದಾಸ್ ಶೆಣೈ (ಮೃತರು) ಹಾಗೂ ಕೋಟೇಶ್ವರದ ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ (ಗಂಭೀರ ಗಾಯಾಳು) ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಿಗ್ಗೆ ಗುರುದಾಸ್ ಶೆಣೈ ಅವರು ಕೋಟ ಜಂಕ್ಷನ್ ಬಳಿ ಸೈಕಲ್ನಲ್ಲಿ ರಸ್ತೆ ದಾಟುತ್ತಿದ್ದರು. ಈ ವೇಳೆಗೆ ಉಡುಪಿ ಕಡೆಯಿಂದ ಕುಂದಾಪುರದತ್ತ ಅತಿವೇಗವಾಗಿ ಧಾವಿಸಿ ಬಂದ ಕಾರು ಸೈಕಲ್ಗೆ ನೇರವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಭರಕ್ಕೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇತ್ತ ಸೈಕಲ್ನಿಂದ ರಸ್ತೆಗೆ ಎಸೆಯಲ್ಪಟ್ಟ ಗುರುದಾಸ್ ಶೆಣೈ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ಚಾಲಕ ಪ್ರದೀಪ್ ಕಾಂಚನ್ ಅವರಿಗೆ ತೀವ್ರ ಗಾಯವಾಗಿದ್ದು ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕೋಟ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

