ಕುಂದಾಪುರ : ತಾಲೂಕಿನ ಶಾನಾಡಿ ಮದಗದ ಕೊರಗ ಕಾಲೋನಿಯಲ್ಲಿ ಭಾನುವಾರ ಮನಕಲಕುವ ದಾರುಣ ಘಟನೆಯೊಂದು ಸಂಭವಿಸಿದ್ದು, ವಿಶೇಷ ಚೇತನ (ವಿಕಲಾಂಗ) ಮಗಳನ್ನು ಕೊಲೆ ಮಾಡಿದ ತಾಯಿಯೊಬ್ಬರು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹತ್ಯೆಗೊಳಗಾದ ಬಾಲಕಿಯನ್ನು ಶಾನಾಡಿ ನಿವಾಸಿ ಸುಧಾಕರ ಕೊರಗ ಎಂಬುವರ ಪುತ್ರಿ ಸುಪ್ರತಿ (14) ಎಂದು ಗುರುತಿಸಲಾಗಿದೆ. ಮಗಳನ್ನು ಕೊಂದ ಬಳಿಕ ಜೀವ ತೆತ್ತ ತಾಯಿಯನ್ನು ನೇತ್ರಾವತಿ (40) ಎಂದು ಗುರುತಿಸಲಾಗಿದೆ.
ಸುಧಾಕರ ಕೊರಗ ಅವರು ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ಪೋಷಿಸುತ್ತಿದ್ದರು. ದಂಪತಿಗೆ ಒಂದು ವರ್ಷದ ಗಂಡು ಮಗುವಿದ್ದು, 14 ವರ್ಷದ ಪುತ್ರಿ ಸುಪ್ರತಿ ಹುಟ್ಟಿನಿಂದಲೇ ತೀವ್ರ ಸ್ವರೂಪದ ವೈಕಲ್ಯದಿಂದ ಬಳಲುತ್ತಿದ್ದಳು. ನಡೆಯಲು ಹಾಗೂ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಮಗಳನ್ನು ತಾಯಿ ನೇತ್ರಾವತಿಯವರೇ ಸಂಪೂರ್ಣ ಆರೈಕೆ ಮಾಡುತ್ತಿದ್ದರು.
ಭಾನುವಾರ ಬೆಳಿಗ್ಗೆ ಸುಧಾಕರ ಅವರು ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ನೇತ್ರಾವತಿಯವರು ಮನೆಯಲ್ಲಿದ್ದ ಕತ್ತಿಯಿಂದ ಮಗಳ ಕುತ್ತಿಗೆ ಸೀಳಿ ಕೊಲೆ ಮಾಡಿದ್ದು, ತದನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೃತ್ಯಕ್ಕೆ ನಿಖರ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಕೌಟುಂಬಿಕ ಪರಿಸ್ಥಿತಿ ಹಾಗೂ ಮಾನಸಿಕ ಒತ್ತಡ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೋಟ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಸುಧಾಕರ್, ಡಿವೈಎಸ್ಪಿ ಬೆಳ್ಳಿಯಪ್ಪ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

