ಕೋಟ: ಕೋಟ ಜಂಕ್ಷನ್ನಲ್ಲಿ ಸೋಮವಾರ (ಅಕ್ಟೋಬರ್ 26) ಕಾರು ಮತ್ತು ಸೈಕಲ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.
ಅಕ್ಟೋಬರ್ 26ರಂದು ಬೆಳ್ಳಂಬೆಳಗ್ಗೆ ಕೋಟ ಜಂಕ್ಷನ್ನಲ್ಲಿ ರಸ್ತೆ ದಾಟುತ್ತಿದ್ದ ಹಿರಿಯ ಆರ್ಎಸ್ಎಸ್ ಕಾರ್ಯಕರ್ತ ಗುರುದಾಸ್ ಶೆಣೈ ಅವರಿಗೆ ಉಡುಪಿಯಿಂದ ಕುಂದಾಪುರದತ್ತ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ತೀವ್ರತೆಗೆ ಸೈಕಲ್ ಸವಾರ ಗುರುದಾಸ್ ಶೆಣೈ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ಅಪಘಾತದಲ್ಲಿ ಕಾರು ಚಾಲಕ, ಕೋಟೇಶ್ವರದ ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ.
ಒಂದೇ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.

